ಬೆಳ್ತಂಗಡಿ ಪೊಲೀಸರಿಗೆ ಹರೀಶ್ ಪೂಂಜಾ ಅವಾಜ್ ವಿಡಿಯೋ ವೈರಲ್ (ETV Bharat) ಮಂಗಳೂರು (ದಕ್ಷಿಣ ಕನ್ನಡ) : ಜಾಸ್ತಿ ಮಾಡಿದ್ರೆ ಜಾಗ್ರತೆ...ಸ್ಟೇಷನ್ ಎಂದರೆ ನಿಮ್ಮ ಅಪ್ಪಂದು ಎಂದು ತಿಳಿದುಕೊಂಡಿದ್ದೀರಾ.. ಹೀಗೆ ಪೊಲೀಸರಿಗೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದೆ.
ಅಕ್ರಮ ಕಲ್ಲಿನ ಕ್ವಾರಿ ನಡೆಸುತ್ತಿರುವ ಆರೋಪದಲ್ಲಿ ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿಯ ಬಂಧನ ಖಂಡಿಸಿ, ಯುವ ಮೋರ್ಚಾ ಕಾರ್ಯಕರ್ತರು ಶನಿವಾರ ತಡರಾತ್ರಿ ವೇಳೆ ಬೆಳ್ತಂಗಡಿ ಪೊಲೀಸ್ ಠಾಣೆಯ ಎದುರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಹರೀಶ್ ಪೂಂಜಾ ಅವರು ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಸಮೇತ ಪೊಲೀಸರಿಗೆ ಅವಾಜ್ ಹಾಕಿದ್ದಾರೆ. ಬಳಿಕ ಅವರು ಕೂಡಾ ಠಾಣೆಯ ಎದುರು ಧರಣಿ ಕುಳಿತು ಶಶಿರಾಜ್ ಶೆಟ್ಟಿ ಬಂಧಿಸಿದ ಪೊಲೀಸರ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಹರೀಶ್ ಪೂಂಜಾ ಪೊಲೀಸರಿಗೆ ಧಮ್ಕಿ ಹಾಕಿರುವ ವಿಡಿಯೋ ವೈರಲ್ ಆಗಿದೆ.
ಶಾಸಕರ ವಿರುದ್ಧ ದೂರು ದಾಖಲು:''ಬೆದರಿಕೆ ಹಾಕಿದ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ'' ಎಂದು ದಕ್ಷಿಣ ಕನ್ನಡದ ಎಸ್ಪಿ ಸಿ.ಬಿ ರಿಷ್ಯಂತ್ ಅವರು ತಿಳಿಸಿದ್ದಾರೆ.
ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಹರೀಶ್ ಪೂಂಜಾ, ಈ ಪ್ರಕರಣದಲ್ಲಿ ಭಾಗಿಯಾಗದ ಬಿಜೆಪಿ ಕಾರ್ಯಕರ್ತ ಶಶಿರಾಜ್ ಅವರನ್ನು ಬಂಧಿಸಿರುವುದು ಖಂಡನೀಯ. ಬೆಳ್ತಂಗಡಿ ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಒಬ್ಬ ಅಮಾಯಕ ಬಿಜೆಪಿ ಕಾರ್ಯಕರ್ತನಿಗೆ ಅನ್ಯಾಯವಾಗುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಈ ಮೂಲಕ ಸುಳ್ಳು ಕೇಸ್ ದಾಖಲಿಸಿ ಕಾರ್ಯಕರ್ತರನ್ನು ಬಂಧಿಸಿ ಅವರನ್ನು ಧಮನಿಸುವ ಕೆಲಸ ನಡೆಯುತ್ತಿದೆ ಎಂದು ದೂರಿದರು.
ಘಟನೆ ಹಿನ್ನೆಲೆ: ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಪ್ರದೇಶದ ಮೇಲೆ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಪೊಲೀಸರು ದಾಳಿ ನಡೆಸಿ, ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಸ್ಥಳದಿಂದ ಅಕ್ರಮ ಗಣಿಗಾರಿಕೆಯಿಂದ ತೆಗೆದಿರುವ ಕಲ್ಲುಗಳ ರಾಶಿ, ಒಂದು ಹಿಟಾಚಿ ವಾಹನ, ಒಂದು ಟ್ರಾಕ್ಟರ್, ಕಲ್ಲು ಸ್ಫೋಟಕ್ಕೆ ಬಳಸುವ 4 ಸಜೀವ ಮದ್ದುಗುಂಡು, ಬಳಕೆಯಾಗಿರುವ 4 ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿತ್ತು.
ಪ್ರಕರಣ ಸಂಬಂಧ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಹಾಗೂ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಎಂಬುವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ಇದನ್ನೂ ಓದಿ :ಅರಣ್ಯಾಧಿಕಾರಿಗೆ ನಿಂದನೆ ಆರೋಪ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಪ್ರಕರಣ