ಸುಬ್ರಹ್ಮಣ್ಯ (ದ.ಕ.):ಕುಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲಿ ಸುಗಮ ಸಂಚಾರ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೊಸದಾಗಿ ಜಾರಿ ಮಾಡಲಾಗಿರುವ ಪಾರ್ಕಿಂಗ್ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದಲ್ಲಿ ದಂಡ ಪಾವತಿಸಬೇಕಾದ ನಿಯಮ ಜಾರಿಗೆ ಬಂದಿದೆ.
ಪ್ರಸಿದ್ದ ಯಾತ್ರಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ವಾಹನ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ವಿವಿಧ ಇಲಾಖೆಗಳು, ಸಾರ್ವಜನಿಕರೊಂದಿಗೆ ಸಭೆ ನಡೆಸಿ ಹೊಸ ಪಾರ್ಕಿಂಗ್ ಹಾಗೂ ಸಂಚಾರ ನಿಯಮ ಜಾರಿಗೊಳಿಸಲಾಗಿತ್ತು. ಹೊಸ ನಿಯಮದ ಬಗ್ಗೆ ಪ್ರಾಯೋಗಿಕ ಹಂತ, ಪ್ರಾಥಮಿಕ ಹಂತದ ಮೂಲಕ ಸಾರ್ವಜನಿಕರಿಗೆ ಪ್ರಚಾರ ಮಾಡಲಾಗಿತ್ತು. ಪೇಟೆಯಲ್ಲಿ ಹೊಸ ನಿಯಮದ ಬಗ್ಗೆ ಈಗಾಗಲೇ ತಿಳಿಸಲಾಗಿರುವುದರಿಂದ ಕಳೆದ ಶನಿವಾರದಿಂದಲೇ ಪಾರ್ಕಿಂಗ್ ಹಾಗೂ ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಸೂಚಿಸಲಾಗಿದೆ.
ವಾಹನಗಳ ಚಕ್ರಕ್ಕೆ ಬೀಗ.. ತಪ್ಪಿಸಿದ ವಾಹನಕ್ಕೆ ಮನೆಗೇ ಬರುತ್ತೇ ನೋಟೀಸ್:ಈ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆಯಿಂದ ರಥಬೀದಿ ಜಂಕ್ಷನ್ವರೆಗೆ ವನ್‌ವೇ ಪ್ರವೇಶ ಹಾಗೂ ಸವಾರಿ ಮಂಟಪದಿಂದ ಕಾಶಿಕಟ್ಟೆವರೆಗೆ ವನ್‌ವೇ ನಿರ್ಗಮನ ನಿಯಮ ಮಾಡಲಾಗಿದೆ. ಕಾಶಿಕಟ್ಟೆಯಿಂದ ರಥಬೀದಿ ಜಂಕ್ಷನ್ವರೆಗೆ ರಸ್ತೆಯ ಎರಡೂ ಬದಿ ಪಾರ್ಕಿಂಗ್ ನಿಷೇಧಿಸಲಾಗಿದ್ದು, ಹಾಗೂ ಸವಾರಿ ಮಂಟಪದಿಂದ ಕಾಶಿಕಟ್ಟೆವರೆಗೆ ಒಂದು ಬದಿ ಪಾರ್ಕಿಂಗ್ ನಿಷೇಧಿಸಲಾಗಿದೆ.
ಈ ನಿಯಮ ಉಲ್ಲಂಘಿಸುವವರಿಗೆ ಹಾಗೂ ಪಾರ್ಕಿಂಗ್ ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆಗೂ ದಂಡ ಬೀಳಲಿದೆ. ವಾಹನಗಳ ಚಕ್ರಕ್ಕೆ ಲಾಕ್ ಕೂಡ ಮಾಡಲಾಗುತ್ತದೆ. ಸುಬ್ರಹ್ಮಣ್ಯದಲ್ಲಿ ಇದೀಗ ಪ್ರವಾಸಿಗರಿಗೆ ಮೊದಲ ಹಂತದ ತಿಳಿವಳಿಕೆ ನೀಡುವ ಸಲುವಾಗಿ ಏಕಮುಖ ಸಂಚಾರದ ಫಲಕ ಮತ್ತು ಸಿಬ್ಬಂದಿಯ ಕಾವಲು ಏರ್ಪಡಿಸಲಾಗಿದೆ.