ಬೆಂಗಳೂರು :ಕೆಎಸ್ಆರ್ಟಿಸಿ ಪ್ರಯಾಣ ಆರಾಮದಾಯಕ ಮಾತ್ರವಲ್ಲ, ಆರ್ಥಿಕ ಭದ್ರತೆಯೂ ಆಗಿದೆ. ಅಪಘಾತದಲ್ಲಿ ಮೃತಪಟ್ಟವರಿಗೆ ಸಾರಿಗೆ ನಿಗಮದ ಸಿಬ್ಬಂದಿಯ ಕುಟುಂಬಕ್ಕೆ ಆರ್ಥಿಕ ಬಲ ನೀಡುತ್ತಿರುವ ಕೆಎಸ್ಆರ್ಟಿಸಿ ತನ್ನ ಪ್ರಯಾಣಿಕರ ಕುಟುಂಬದ ಹಿತವನ್ನು ಕಾಯಲು ಮುಂದಾಗಿದೆ.
ಈಗಾಗಲೇ ಅಪಘಾತದಲ್ಲಿ ಸಾವನ್ನಪ್ಪಿದ ಸಾರಿಗೆ ಸಿಬ್ಬಂದಿಯ ಕುಟುಂಬಗಳಿಗೆ ಒಂದು ಕೋಟಿ ರೂ. ಅಪಘಾತ ವಿಮೆ ಮಾಡಿಸುವ ಮೂಲಕ ಆರ್ಥಿಕ ಭದ್ರತೆಯನ್ನು ಕೆಎಸ್ಆರ್ಟಿಸಿ ಕಲ್ಪಿಸಿದೆ. ಇದೇ ಮೊದಲ ಬಾರಿಗೆ ನಿಗಮದ ಬಸ್ ಅಪಘಾತದಲ್ಲಿ ಮೃತಪಡುವ ಪ್ರಯಾಣಿಕರ ಕುಟುಂಬಕ್ಕೆ 10 ಲಕ್ಷ ರೂ.ಗಳ ಪರಿಹಾರವನ್ನು ಕೆಎಸ್ಆರ್ಟಿಸಿ ನೀಡಿದೆ. ಪರಿಹಾರದ ಚೆಕ್ ಅನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಕೆಎಸ್ಆರ್ಟಿಸಿ ಅಧ್ಯಕ್ಷ ಎಸ್.ಆರ್ ಶ್ರೀನಿವಾಸ್ ಅವರು ಸೋಮವಾರ ವಿತರಿಸಿದರು.
ಈ ಹಿಂದೆ ನಿಗಮದ ಬಸ್ಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ 3 ಲಕ್ಷ ರೂ. ಪರಿಹಾರ ಚೆಕ್ಅನ್ನು ನೀಡಲಾಗುತ್ತಿತ್ತು. ಇದೀಗ ಅವಲಂಬಿತರಿಗೆ ಹೆಚ್ಚಿನ ಆರ್ಥಿಕ ಸೌಲಭ್ಯವನ್ನು ಒದಗಿಸುವ ದೃಷ್ಟಿಯಿಂದ 2024ರ ಜನವರಿ 1 ರಿಂದ ಜಾರಿಗೆ ಬರುವಂತೆ ಈ ಪರಿಹಾರ ಮೊತ್ತವನ್ನು 10 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿತ್ತು.
ಅದರಂತೆ 2024 ರ ಫೆಬ್ರವರಿ 4 ರಂದು ಹಾಸನ ವಿಭಾಗದ ಚನ್ನರಾಯಪಟ್ಟಣ ಘಟಕದ ವಾಹನ ಸಂಖ್ಯೆ ಕೆಎ-13-ಎಫ್-2261 ಬಸ್ ಬೆಂಗಳೂರು ಧರ್ಮಸ್ಥಳ ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿರುವಾಗ ಸಕಲೇಶಪುರದ ಸಮೀಪ ಬಾಗೆ ಎಂಬ ಸ್ಥಳದ ತಿರುವಿನಲ್ಲಿ ಅಪಘಾತ ಸಂಭವಿಸಿತ್ತು. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಜಿ.ಎನ್ ಅಮೃತ್, (34 ವರ್ಷ) ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಹೀಗಾಗಿ ಮೃತರ ತಂದೆ ಜಿ.ಡಿ ನಾಗರಾಜು ಅವರಿಗೆ ಇಂದು 10 ಲಕ್ಷ ರೂ. ಗಳ ಅಪಘಾತ ಪರಿಹಾರದ ಚೆಕ್ ಅನ್ನು ವಿತರಿಸಿದ ರಾಮಲಿಂಗಾರೆಡ್ಡಿ ಮತ್ತು ಶ್ರೀನಿವಾಸ್ ಅವರು ಸಾಂತ್ವನ ಹೇಳಿದರು.
ಅಪಘಾತಗಳು ಆಕಸ್ಮಿಕವೇ ಆದರೂ ಅದರಿಂದಾಗುವ ಪ್ರಾಣ ಹಾನಿ ಮತ್ತು ಕುಟುಂಬಕ್ಕೆ ಉಂಟಾಗುವ ನಷ್ಟವನ್ನು ಭರಿಸಲು ಅಸಾಧ್ಯ. ಆದರೂ ನಿಗಮವು ಪ್ರಯಾಣಿಕರೆಡೆಗಿನ ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಜಾರಿಗೊಳಿಸಿರುವುದಾಗಿದೆ. ಇತ್ತೀಚೆಗಷ್ಟೇ ಅಪಘಾತಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ರಾತ್ರಿ ಪಾಳಿಯ ಬಸ್ಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರಿಗೆ ಫ್ಲಾಸ್ಕ್ (ಕಾಪಿ/ಟೀ/ಬಿಸಿನೀರು ಕುಡಿಯಲು ಅನುವಾಗುವಂತೆ) ನೀಡಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಎಂಡಿ ವಿ.ಅನ್ಬುಕುಮಾರ್, ನಿರ್ದೇಶಕಿ ಡಾ. ನಂದಿನಿ ದೇವಿ ಹಾಗು ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಇದನ್ನೂ ಓದಿ :50 ನೂತನ ಬಸ್ಗಳ ಲೋಕಾರ್ಪಣೆ; ಅಪಘಾತ ರಹಿತ 38 ಚಾಲಕರಿಗೆ ಸಚಿವ ರಾಮಲಿಂಗಾರೆಡ್ಡಿ ಸನ್ಮಾನ