ಮೂರ್ತಿ ಕಲಾವಿದ ಕೌಶಿಕ್ರಿಂದ ಮಾಹಿತಿ (ETV Bharat) ಉಡುಪಿ:ಗಣೇಶೋತ್ಸವ ಸಮೀಪಿಸುತ್ತಿದೆ. ವಿನಾಯಕನ ಮೂರ್ತಿಗೆ ಅಂತಿಮ ಸ್ಪರ್ಶ ನೀಡುವ ಕೆಲಸ ಎಲ್ಲೆಡೆ ಭರದಿಂದ ಸಾಗುತ್ತಿದೆ. ಚಿಕ್ಕ, ದೊಡ್ಡ ಮಟ್ಟದ ಗಣೇಶನ ವಿಗ್ರಹಗಳನ್ನು ತಯಾರಿಸಿ, ಮೂರ್ತಿಗೆ ವಿವಿಧ ಬಣ್ಣ ಹಚ್ಚಿ ಸುಂದರಗೊಳಿಸುತ್ತಿರುವ ಕೊನೆಯ ಹಂತದಲ್ಲಿ ಕಲಾಕಾರರು ನಿರತರಾಗಿದ್ದಾರೆ.
ವಿಗ್ರಹಕ್ಕೆ ಆವೆ ಮಣ್ಣಿನ ಕೊರತೆ:"ಪ್ರತೀ ವರ್ಷ ಗಣೇಶ ಚತುರ್ಥಿಯಂದು ಆವೆ ಮಣ್ಣಿನಿಂದ ಗಣೇಶನ ವಿಗ್ರಹ ತಯಾರಿಸುತ್ತೇವೆ. ಆದರೆ ಈ ಬಾರಿ ಆವೆ ಮಣ್ಣಿನ ಕೊರತೆ ಇದೆ. ಕುಂದಾಪುರ, ಆತ್ರಾಡಿ, ಭಾಗದಿಂದ ಮಣ್ಣು ತಂದು ವಿಗ್ರಹ ತಯಾರಿಸಬೇಕಾಗುತ್ತದೆ. ವಿಗ್ರಹ ತಯಾರಿಕೆಗೆ ನಮ್ಮ ತಂದೆಯವರು ನಮಗೆ ಸ್ಪೂರ್ತಿ. ಕಾಪು, ಉದ್ಯಾವರ, ಬೆಳ್ಮಣ್ಣು, ಪರ್ಕಳ, ಉಡುಪಿ ಭಾಗದಿಂದ ಹೆಚ್ಚಾಗಿ ವಿಗ್ರಹ ತಯಾರಿಕೆಗೆ ಬೇಡಿಕೆ ಬರುತ್ತದೆ" ಎಂದು ಕಲಾವಿದ ಕೌಶಿಕ್ ಹೇಳಿದರು.
ಕೃಷ್ಣ ಮಠದ ರಥಬೀದಿಯಲ್ಲಿ ಹೂ, ಕಬ್ಬು ಮಾರಾಟ:ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ವಿವಿಧ ಕಡೆಗಳಿಂದ ಬಂದಿರುವ ಹೂ ಮಾರಾಟಗಾರರು ವ್ಯಾಪಾರ ಆರಂಭಿಸಿದ್ದಾರೆ. ಅನೇಕ ಜನರು ಅಲಂಕಾರಕ್ಕೆ ಹೂ ಮತ್ತು ಗಣೇಶನಿಗೆ ನೈವೇದ್ಯ ಮಾಡಲು ಕಬ್ಬು ಖರೀದಿಸುವಲ್ಲಿ ತೊಡಗಿದ್ದಾರೆ. ಹೂವುಗಳ ದರ ಇಂತಿದೆ.
ಸೇವಂತಿಗೆ-100- ರೂ.
ಮೇಘನಾ(ಮಿಶ್ರ ಬಣ್ಣ ಸೇವಂತಿಗೆ)-150 ರೂ.
ಕಾಕಡ ಮಲ್ಲಿಗೆ-100 ರೂ.
ಕಣಗಲೆ ಮಲ್ಲಿಗೆ- ಅಂದಾಜು 100/200 ರೂ.
ಸಿಂಗಾರ(ಪಿಂಗಾರ)-180 ರಿಂದ 200 ರೂ.
ಗುಲಾಬಿ ಮಾಲೆಗೆ-100 ರೂ.
ಅಂಗಡಿಗಳಲ್ಲಿ ಸಿಗುವ ಗುಲಾಬಿ ಹೂವುಗಳ ದರ 10ರಿಂದ 20ರೂ ವರೆಗೆ ಏರಿಕೆಯಾಗಿದೆ. ಹುಬ್ಬಳ್ಳಿ, ಹಾಸನ ಭಾಗಗಳಿಂದ ಮಾರಾಟಕ್ಕೆ ಬಂದಿರುವ ಕಬ್ಬುಗಳ ದರ 80ರಿಂದ 100 ರೂ.ಗೆ ಮಾರಾಟವಾಗುತ್ತಿದೆ.
ಕಾರ್ಯಕ್ರಮ ರಾತ್ರಿ 10 ಗಂಟೆಗೆ ಅಂತ್ಯ:ಗಣೇಶೋತ್ಸವ ಹಬ್ಬಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಹತ್ತು ಗಂಟೆಗೆ ಕೊನೆಗೊಳಿಸಬೇಕಾಗಿದೆ. ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
"ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಯಾ ವ್ಯಾಪ್ತಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಮೂರ್ತಿಗಳನ್ನು ಇಡುವ ಸ್ಥಳಗಳಲ್ಲಿ ಅಲ್ಲಿನ ಸಂಬಂಧಪಟ್ಟ ಅಧಿಕಾರಿಗಳ ಬಳಿ ಅನುಮತಿಯನ್ನು ಪಡೆದುಕೊಳ್ಳಬೇಕು" ಎಂದರು.
"ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಡಿಜೆ ಸೌಂಡ್ಗಳನ್ನು ಬಳಸುವಂತಿಲ್ಲ. ಕಾರ್ಯಕ್ರಮವನ್ನು 10 ಗಂಟೆ ಒಳಗಡೆ ಮುಗಿಸಬೇಕು ಹಾಗೂ ನಿಯಮಗಳನ್ನು ಪಾಲಿಸದಿದ್ದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಒಟ್ಟು 470 ಕಡೆಗಳಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಎಲ್ಲೆಡೆಗಳಲ್ಲಿ ಸಹ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ. 62ಕಡೆಗಳಲ್ಲಿ ಈದ್ ಮಿಲಾದ್ ಹಬ್ಬ ನಡೆಯುತ್ತಿದ್ದು ಅಲ್ಲಿ ಕೂಡಾ ಇದೇ ರೀತಿಯ ನಿಯಮಗಳು ಅನ್ವಯವಾಗುತ್ತದೆ. ಹೆಚ್ಚುವರಿಯಾಗಿ ಸಿಬ್ಬಂದಿಯನ್ನು ಬಿಟ್ಟು 200 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಕೆಎಸ್‌ಆರ್‌ಪಿ ಹಾಗೂ ಡಿಆರ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನೂ ಸಹ ನೇಮಕ ಮಾಡಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಕುಂದಾನಗರಿಯಲ್ಲಿ ಗಣೇಶೋತ್ಸವಕ್ಕೆ ಸಿದ್ಧತೆ: ಮಾರುಕಟ್ಟೆ ಫುಲ್ ರಶ್, ಅಲಂಕಾರಿಕ ವಸ್ತುಗಳ ಖರೀದಿ ಭರಾಟೆ - Ganesha Festival Market Rush