ಬೆಂಗಳೂರು : ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ 20 ವರ್ಷಗಳ ಬಳಿಕ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗಜೇಂದ್ರ (46) ಬಂಧಿತ ಆರೋಪಿ. ವಿಲ್ಸನ್ ಗಾರ್ಡನ್ ಠಾಣೆ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ ಕೊತ್ತರವಿ ಎಂಬಾತನ ಹತ್ಯೆ ಪ್ರಕರಣದಲ್ಲಿ ಗಜೇಂದ್ರ ಆರೋಪಿಯಾಗಿದ್ದರು. ಹಳೆ ದ್ವೇಷ ಹಿನ್ನೆಲೆ ರವಿಯನ್ನ ಹತ್ಯೆಗೈದಿರುವ ಆರೋಪ ಇವರ ಮೇಲಿದೆ. ಗಜೇಂದ್ರ ಸೇರಿ ಈವರೆಗೆ ಒಟ್ಟು 9 ಮಂದಿಯನ್ನ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆ ಪ್ರಕರಣದಲ್ಲಿ 8ನೇ ಆರೋಪಿಯಾಗಿದ್ದ ಗಜೇಂದ್ರ ಬಂಧನ ಭೀತಿಯಿಂದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದರು. ಇತ್ತೀಚೆಗೆ ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಸಿಸಿಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಮಾಡುವಂತೆ ತಾಕೀತು ಮಾಡಿದ್ದರು.
ಹಳೆ ಪ್ರಕರಣಗಳ ತನಿಖೆ ಚುರುಕುಗೊಳಿಸಿದ ಸಿಸಿಬಿ ರೌಡಿ ನಿಗ್ರಹ ದಳದ ಇನ್ಸ್ಪೆಕ್ಟರ್ ನಯಾಜ್ ಅಹಮದ್ ನೇತೃತ್ವದ ತಂಡ, ಖಚಿತ ಮಾಹಿತಿ ಮೇರೆಗೆ ಸುದ್ದುಗುಂಟೆಪಾಳ್ಯದಲ್ಲಿ ಕಳೆದ 15 ವರ್ಷಗಳಿಂದ ನೆಲೆಸಿದ್ದ ಗಜೇಂದ್ರನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
20 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದು ಎಲ್ಲಿ ?: ಕೊತ್ತ ರವಿ ಹತ್ಯೆ ಪ್ರಕರಣದಲ್ಲಿ 8ನೇ ಆರೋಪಿಯಾಗಿರುವ ಗಜೇಂದ್ರ 2004ರಲ್ಲಿ ಬಂಧಿತನಾಗಿ ಒಂದು ವರ್ಷ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದ. ಜೆ. ಪಿ ನಗರದ ಮಾರನಹಳ್ಳಿಯಲ್ಲಿ ವಾಸವಾಗಿದ್ದ ಅವರ ಮನೆ ಮಾರಿ ಬಂಧನ ಭೀತಿಯಿಂದ ತಮಿಳುನಾಡಿನ ವೆಲೂರಿನಲ್ಲಿ ಅವಿತುಕೊಂಡಿದ್ದರು.