ಬೆಂಗಳೂರು :ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ‘ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ (ಜಾತಿ ಗಣತಿ)ಯನ್ನು ಆಕ್ಷೇಪಿಸಿ ಹೈಕೋರ್ಟ್‌ಗೆ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.
ಬೆಂಗಳೂರಿನ ಕೆ.ಸಿ ಶಿವರಾಮ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿತು. ಅಲ್ಲದೇ, ಜಾತಿ ಗಣತಿ ಸಂಬಂಧ ಸಲ್ಲಿಸಲಾಗಿರುವ ಇತರ ಅರ್ಜಿಗಳೊಂದಿಗೆ ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವುದಾಗಿ ಹೇಳಿದ ನ್ಯಾಯಪೀಠ ವಿಚಾರಣೆಯನ್ನು ಜೂನ್ 5ಕ್ಕೆ ಮುಂದೂಡಿತು.