ಚಾಮರಾಜನಗರ:ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಆರೋಪದಡಿ ಮಾಜಿ ಶಾಸಕ ಯತೀಂದ್ರ ವಿರುದ್ಧ ಫ್ಲೈಯಿಂಗ್ ಸ್ಕ್ವಾಡ್ ತಂಡ ಹನೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.
ಏ.1 ರಂದು ಫ್ಲೈಯಿಂಗ್ ಸ್ಕಾಡ್ ತಂಡದ ಗುಂಡುರಾವ್ ಎಂಬವರು ಹನೂರು ಠಾಣೆಗೆ ದೂರು ಕೊಟ್ಟು ಶಾಸಕ ಯತೀಂದ್ರ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ, ಅವಹೇಳನಕಾರಿಯಾಗಿ ಭಾಷಣ ಮಾಡಿದ್ದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಕಳೆದ 28 ರಂದು ಹನೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ "ಕೇಂದ್ರ ಗೃಹ ಸಚಿವ ಅಮಿತ್ ಶಾ ಓರ್ವ ಗೂಂಡಾ, ರೌಡಿ, ಗುಜರಾತ್ನಲ್ಲಿ ನರಮೇದ ಮಾಡಿದ ಆರೋಪ ಹೊತ್ತಿದ್ದಾರೆ. ದೇಶದ ಉನ್ನತ ಸ್ಥಾನದಲ್ಲಿದ್ದು ಇಂತವರನ್ನು ಮೋದಿಯವರು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ" ಎಂದು ಕಿಡಿಕಾರಿದ್ದರು.
ಈ ಸಂಬಂಧ ಬಿಜೆಪಿ ಬೆಂಗಳೂರಿನಲ್ಲಿ ದೂರು ದಾಖಲು ಮಾಡಿತ್ತು. ಯತೀಂದ್ರಗೆ ಚಾಮರಾಜನಗರ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ್ದಾರೆ. ಈಗ ಹನೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.
ಇದನ್ನೂ ಓದಿ:ಅಮಿತ್ ಶಾ ವಿರುದ್ಧ ಗೂಂಡಾ, ರೌಡಿ ಹೇಳಿಕೆ: ಯತೀಂದ್ರಗೆ ನೋಟಿಸ್ ಜಾರಿ - Notice to Yatindra