ಬೆಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ ಮುಂದುವರೆದಿದೆ. ಭಾನುವಾರ ಇಡೀ ದಿನ ಮತ್ತು ಇಂದು ಬೆಳಗಿನಿಂದ ಮೋಡ ಕವಿದ ವಾತಾವರಣ ಹಾಗೂ ಆಗಾಗ ಮಳೆಯಾಗುತ್ತಿದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನದಲ್ಲಿ ಕುಸಿತವಾಗಿ ಚಳಿ ಹೆಚ್ಚಾಗುತ್ತಿದೆ. ಗರಿಷ್ಠ ತಾಪಮಾನ 22.4 ಡಿಗ್ರಿ ದಾಖಲಾಗಿದೆ.
ಇಂದು ಕೂಡ ಕೆ.ಆರ್. ಮಾರುಕಟ್ಟೆ, ಚಿಕ್ಕಪೇಟೆ, ಸುಲ್ತಾನ್ ಪೇಟೆ, ಬಳೆಪೇಟೆ, ಕಾಟನ್‌ಪೇಟೆ, ವಿಜಯನಗರ, ಕಾಮಾಕ್ಷಿಪಾಳ್ಯ, ಮೆಜೆಸ್ಟಿಕ್, ಮೈಸೂರು ರಸ್ತೆ, ಬಸವನಗುಡಿ, ಜೆ.ಪಿ. ನಗರ, ಮಲ್ಲೇಶ್ವರ, ಜೆ.ಸಿ. ರಸ್ತೆ, ವಿಶ್ವೇಶ್ವರಯ್ಯಪುರ, ವಿದ್ಯಾಪೀಠ, ಹಗದೂರು, ಯಲಹಂಕ, ಆರ್.ಆರ್. ನಗರ, ವಿ. ನಾಗೇನಹಳ್ಳಿ, ಪುಲಿಕೇಶಿನಗರ, ಅರಕೆರೆ, ಹೆಚ್‌ಎಸ್‌ಆರ್ ಲೇಔಟ್, ನಾಗಪುರ, ಕಾಟನ್‌ಪೇಟೆ, ಚಾಮರಾಜಪೇಟೆ, ಬಿಟಿಎಂ ಲೇಔಟ್, ಹೂಡಿ ಸೇರಿದಂತೆ ನಗರ ವಿವಿಧೆಡೆ ಜಿಟಿಜಿಟಿ ಮಳೆಯಾಗುತ್ತಿದೆ. ಸಿಲ್ಕ್ ಬೋರ್ಡ್ ಜಂಕ್ಷನ್, ಓಕುಳಿಪುರ ಅಂಡರ್‌ಪಾಸ್, ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಂಭಾಗ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು.
ಹೆಬ್ಬಾಳ ಮೇಲ್ಸೇತುವೆ, ಎಸ್ಟೀಂ ಮಾಲ್‌ನಿಂದ ಮೇಕ್ರಿ ವೃತ್ತದ ಕಡೆಗೆ ಒಳ ಬರುವ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಹೆಬ್ಬಾಳ ಫ್ಲೈ ಓವರ್ ಮೇಲೆ ವಾಹನ ದಟ್ಟಣೆ ಕಂಡುಬರುತ್ತಿದೆ. ಹಲವು ಕಡೆಗಳಲ್ಲಿ ಮಳೆಯಿಂದ ಸಿಗ್ನಲ್ ಕೆಟ್ಟು ಹೋಗಿರುವ ಕಾರಣ ವಾಹನದಟ್ಟಣೆ ಉಂಟಾಗುತ್ತಿದೆ. ಕೆಲ ರಸ್ತೆಗಳ ಮೇಲೆ ನೀರು ನಿಂತ ಪರಿಣಾಮ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ.
ನಾಳೆ ಭಾರಿ ಮಳೆಯ ಸಾಧ್ಯತೆ:ನಗರದಲ್ಲಿ ಸುರಿಯುತ್ತಿರುವ ಮಳೆ ಮುಂದಿನ ಮೂರು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.