ಬೆಳಗಾವಿ:ಸಾಂಪ್ರದಾಯಿಕ ಬೆಳೆಗಳಿಂದ ಕೆಲವು ರೈತರು ವಿಮುಖರಾಗುತ್ತಿದ್ದು, ಹೊಸ ಬೆಳೆಗಳ ಪ್ರಯೋಗಕ್ಕೆ ಕೈ ಹಾಕಿ ಯಶಸ್ಸು ಕಾಣುತ್ತಿದ್ದಾರೆ. ಇದಕ್ಕೆ ಹೊಸ ಉದಾಹರಣೆ ಬೆಳಗಾವಿಯ ತಂದೆ ಮತ್ತು ಮಗ.
ಸಾಫ್ಟ್‌ವೇರ್ ಇಂಜಿನಿಯರ್ ಮಗನ ಮಾತಿಗೆ ಕಟ್ಟುಬಿದ್ದು ಡ್ರ್ಯಾಗನ್ ಫ್ರೂಟ್ ಬೆಳೆದು ರೈತರೊಬ್ಬರು ಲಕ್ಷಾಂತರ ಆದಾಯ ಗಳಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
ಸಾಫ್ಟ್‌ವೇರ್ ಇಂಜಿನಿಯರ್ ಮಗನ ಸಲಹೆಯಂತೆ ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿಯಾದ ತಂದೆ (ETV Bharat) ಬಹುತೇಕ ರೈತರು ಒಂದೇ ಬೆಳೆಗೆ ಅಂಟಿಕೊಂಡು, ಅಕ್ಕಪಕ್ಕದ ಹೊಲದವರು ಬೆಳೆದ ಬೆಳೆಯನ್ನೇ ತಾವೂ ಬೆಳೆಯುವುದು ಸಾಮಾನ್ಯವಾಗಿದೆ. ಇದಕ್ಕೆ ತದ್ವಿರುದ್ಧ ಎನ್ನುವಂತೆ ಬೈಲಹೊಂಗಲದ ಸೋಮಲಿಂಗಪ್ಪ ಲಿಂಬೆನ್ನವರ ಡ್ರ್ಯಾಗನ್ ಫ್ರೂಟ್ ಎಂಬ ವಿದೇಶಿ ಹಣ್ಣಿನ ಕೃಷಿಯಲ್ಲಿ ಯಶಸ್ವಿ ಹೆಜ್ಜೆ ಇಟ್ಟಿದ್ದಾರೆ.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಿಂದ ಸಸಿ ತಂದಿದ್ದ ಸೋಮಲಿಂಗಪ್ಪ, ತಮ್ಮ ಜಮೀನಿನ 1 ಎಕರೆಯಲ್ಲಿ 2022ರ ಜನವರಿ 15ರಂದು ನಾಟಿ ಮಾಡಿದ್ದರು. ಅದಾದ ಒಂದೂವರೆ ವರ್ಷದ ಬಳಿಕ ಹಣ್ಣಿನ ಕಟಾವು ಶುರುವಾಗಿದ್ದು, ಈವರೆಗೆ 7.50 ಲಕ್ಷ ಆದಾಯ ಗಳಿಸುವ ಮೂಲಕ ಬದಲಾವಣೆಗೆ ನಾಂದಿ ಹಾಡಿದ್ದಾರೆ.
ಬೆಳೆಯುವುದು ಹೇಗೆ?:1 ಎಕರೆ ಕೆಂಪು ಮಣ್ಣಿನ ಭೂಮಿಯಲ್ಲಿ ಸೋಮಲಿಂಗಪ್ಪ, 3,700 ಡ್ರ್ಯಾಗನ್ ಫ್ರೂಟ್ ಸಸಿ ನಾಟಿ ಮಾಡಿದ್ದು, 1 ಕಂಬಕ್ಕೆ 4 ಸಸಿ ನೆಟ್ಟಿದ್ದಾರೆ. ಇದಕ್ಕೆ 350 ಕಂಬಗಳನ್ನು ಬಳಸಿದ್ದಾರೆ. 10 ಅಡಿಗೊಂದು ಸಾಲು ಬಿಟ್ಟಿದ್ದು, ಕಂಬದಿಂದ ಕಂಬಕ್ಕೂ 10 ಅಡಿ ಅಂತರ ಕಾಯ್ದುಕೊಂಡಿದ್ದಾರೆ. ಗಿಡ ನೆಲಕ್ಕೆ ಬೀಳದಂತೆ ತಂತಿಯಿಂದ ಬಿಗಿದಿದ್ದಾರೆ. ಹನಿ ನೀರಾವರಿ ವ್ಯವಸ್ಥೆ ಅಳವಡಿಸಿದ್ದು, ಸೆಗಣಿ, ಕೋಳಿ ಗೊಬ್ಬರ, ಗೋಮೂತ್ರ ಸೇರಿ ಸಂಪೂರ್ಣ ಸಾವಯವ ಪದ್ಧತಿ ಮೂಲಕವೇ ಸಮೃದ್ಧವಾಗಿ ಕೃಷಿ ಮಾಡಿದ್ದಾರೆ.
ಡ್ರ್ಯಾಗನ್ ಫ್ರೂಟ್ (ETV Bharat) 7.50 ಲಕ್ಷ ರೂ ಆದಾಯ:ಇದೇ ಮೊದಲ ಬಾರಿ ಡ್ರ್ಯಾಗನ್ ಫ್ರೂಟ್ ಬೆಳೆದಿರುವ ಸೋಮಲಿಂಗಪ್ಪ, ಮೊದಲ ಸಲ ಹಣ್ಣು ಕಟಾವು ಮಾಡಿದಾಗ 18 ಕ್ವಿಂಟಾಲ್ ಇಳುವರಿ ಪಡೆದಿದ್ದು, 1 ಕೆಜಿಗೆ 150 ರೂ. ಮಾರಾಟ ಮಾಡಿದ್ದಾರೆ. ಎರಡನೇ ಬಾರಿ 23 ಕ್ವಿಂಟಾಲ್- 120 ರೂ., ಮೂರನೇ ಬಾರಿ 26 ಕ್ವಿಂಟಾಲ್-100 ರೂ., 4ನೇ ಬಾರಿ 14 ಟನ್-100 ರೂ. ದರ ಸಿಕ್ಕಿದೆ. ಒಟ್ಟಾರೆ 8 ಟನ್ ಗೂ ಅಧಿಕ ಇಳುವರಿಯಲ್ಲಿ 7.50 ಲಕ್ಷ ರೂ. ಆದಾಯ ಇವರ ಕೈ ಸೇರಿದೆ. ವ್ಯಾಪಾರಿಗಳೇ ಹೊಲಕ್ಕೆ ಬಂದು ಹಣ್ಣು ಖರೀದಿಸುತ್ತಾರೆ. 70 ರೂ.1 ಸಸಿ, 600 ರೂ. 1 ಕಂಬ ಮತ್ತು ತಂತಿ ಸೇರಿ ಒಟ್ಟಾರೆ 7-8 ಲಕ್ಷ ರೂ. ಖರ್ಚು ಬಂದಿದೆ. ಈಗ ಮಾಡಿದ ಖರ್ಚು ಸಿಕ್ಕಿದ್ದು, ಇನ್ಮುಂದೆ ಬರುವುದೆಲ್ಲವೂ ಲಾಭವೇ. 25 ವರ್ಷಗಳವರೆಗೂ ಹಣ್ಣು ಆದಾಯ ಕೊಡಲಿದೆ ಎನ್ನುತ್ತಾರೆ ಸೋಮಲಿಂಗಪ್ಪ.
ಮಗ ಪ್ರೇರಣೆ:"ಏನಾದರೂ ಹೊಸ ಬೆಳೆ ಬೆಳೆಯೋಣ ಎಂದು ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನಮ್ಮ ಮಗ ಮಹೇಶ, ಕಳೆದ ಮೂರುನಾಲ್ಕು ವರ್ಷಗಳಿಂದ ಹೇಳುತ್ತಲೇ ಇದ್ದ. ಆಗ ನಾವು ಖರ್ಚು ಬಹಳ ಬರುತ್ತೆ ಅಂತಾ ಸುಮ್ಮನಾಗಿದ್ದೆವು. ಈ ಬಾರಿ ಡ್ರ್ಯಾಗನ್ ಫ್ರೂಟ್ ಬೆಳೆಯೋಣ ಎಂದು ಒತ್ತಾಯ ಮಾಡಿದ್ದಕ್ಕೆ, ಇಷ್ಟೆಲ್ಲಾ ಹೇಳುತ್ತಿದ್ದಾನೆ ಎಂದು ಅವನ ಮಾತಿಗೆ ಕಟ್ಟು ಬಿದ್ದು ಬೆಳೆದೆವು. ಮಗನ ಪ್ರೇರಣೆಯಿಂದ ಲಾಭದಾಯಕ ಹೊಸ ಬೆಳೆದು ಖುಷಿಯಿಂದ ಇದ್ದೇವೆ" ಎಂದು ಸೋಮಲಿಂಗಪ್ಪ ಸಂತಸ ವ್ಯಕ್ತಪಡಿಸಿದರು.
ಡ್ರ್ಯಾಗನ್ ಫ್ರೂಟ್ (ETV Bharat) "ನಮ್ಮದು ಕೆಂಪು ಮಣ್ಣಿನ ಭೂಮಿ. ಈ ಮೊದಲು ನಮ್ಮ ತಂದೆ ಗೋವಿನಜೋಳ, ಟೊಮೆಟೊ ಸೇರಿ ಮತ್ತಿತರ ಬೆಳೆ ಬೆಳೆಯುತ್ತಿದ್ದರು. ಹೊಸ ಬೆಳೆ ಏನಾದರೂ ಮಾಡಬೇಕೆಂದು ಯೋಚಿಸಿ ಶಿರಾ, ವಿಜಯಪುರ, ಮುಧೋಳ, ಹಾಸನ ಸೇರಿ ಮತ್ತಿತರ ಕಡೆ ಬೆಳೆದಿದ್ದ ಡ್ರ್ಯಾಗನ್ ಫ್ರೂಟ್ ನೋಡಿ ಬಂದೆ. ಸಂಪೂರ್ಣ ಅಧ್ಯಯನ ಮಾಡಿ, ನಮ್ಮಲ್ಲೂ ಈ ವಿದೇಶಿ ಹಣ್ಣು ಪ್ರಯೋಗಿಸಿದ್ದೇವೆ. ಈವರೆಗೆ ಒಳ್ಳೆಯ ಆದಾಯ ಬಂದಿದೆ. ಆದರೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮತ್ತು ದರ ನಿಗದಿಪಡಿಸಬೇಕಿದೆ. ಅಲ್ಲದೇ ತೋಟಗಾರಿಕಾ ಇಲಾಖೆ ಮಾರ್ಗದರ್ಶನ ನೀಡಿದರೆ ಮತ್ತಷ್ಟು ರೈತರು ಡ್ರ್ಯಾಗನ್ ಫ್ರೂಟ್ ಕಡೆ ಮುಖ ಮಾಡಬಹುದು" ಎಂದು ಮಹೇಶ್ ಲಿಂಬೆನ್ನವರ ತಿಳಿಸಿದರು.
ಈ ಕುರಿತು ಪಕ್ಕದ ಜಮೀನು ಮಾಲೀಕ ಶಿವಪ್ಪ ಹಾವನ್ನವರ ಮಾತನಾಡಿ, "ಸೋಮಲಿಂಗಪ್ಪ ಕಷ್ಟಪಟ್ಟು ನಾವು ಎಂದೂ ನೋಡದ ಹೊಸ ಹಣ್ಣು ಬೆಳೆದಿದ್ದಾರೆ. ಇಂಥ ದುಬಾರಿ ಹಣ್ಣು ಬೆಳೆಯುವುದರಿಂದ ಆರ್ಥಿಕವಾಗಿ ರೈತರು ಸುಧಾರಣೆ ಆಗಬಹುದು. ಡ್ರ್ಯಾಗನ್ ಫ್ರೂಟ್ ಬೆಳೆಯುವಂತೆ ನನ್ನ ಮಕ್ಕಳಿಗೂ ಹೇಳುತ್ತೇನೆ" ಎಂದರು.
ಇದನ್ನೂ ಓದಿ:ಬರದ ನಾಡಲ್ಲಿ ಡ್ರ್ಯಾಗನ್‌ಫ್ರೂಟ್ ಬೆಳೆದ ಫಾರ್ಮಾಸಿಸ್ಟ್; ಕೈತುಂಬಾ ಆದಾಯ ನೀಡುತ್ತಿರುವ ಹಣ್ಣಿನ ಬೆಳೆ - DRAGON FRUIT
ಇದನ್ನೂ ಓದಿ:1 ಎಕರೆ, 4 ಲಕ್ಷ ರೂ. ಲಾಭ: ತಂಗಿ ಮದುವೆಗೆ ಆಸರೆಯಾದ ಕ್ಯಾಬೇಜ್: ಬೆಳಗಾವಿ ಯುವ ರೈತನ ಕೃಷಿ ಸಾಧನೆ