ಶಿವಮೊಗ್ಗ/ಬೆಳಗಾವಿ:ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ವಿವಿಧ ರೈತ ಸಂಘಟನೆಗಳು ದೆಹಲಿ ಚಲೋ ನಡೆಸುತ್ತಿದ್ದು, ಇದರಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ರೈತರನ್ನು ತಡೆಯುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ಇಂದು ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯಿತು. ಶಿವಮೊಗ್ಗದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಪ್ರತಿಭಟಿಸಿದರು. ನಗರದ ಸೈನ್ಸ್ ಮೈದಾನದಿಂದ ಹೊರಟ ರೈತ ಸಂಘದ ಪ್ರತಿಭಟನಾ ಮೆರವಣಿಗೆ ಬಿ.ಹೆಚ್.ರಸ್ತೆ, ಶಿವಪ್ಪನಾಯಕ ವೃತ್ತ, ನೆಹರು ರಸ್ತೆ, ಟಿಎಸ್ಬಿ ಶೀನಪ್ಪ ಶೆಟ್ಟಿ ವೃತ್ತದ ಮೂಲಕ, ಬಾಲರಾಜ್ ಅರಸ್ ರಸ್ತೆಯಿಂದ ಮಹಾವೀರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು.
ಕನಿಷ್ಠ ಬೆಂಬಲ ಬೆಲೆ, ವಿದ್ಯುತ್ ಖಾಸಗೀಕರಣಕ್ಕೆ ವಿರೋಧ, ಸಾಲ ಮನ್ನಾ, ಡಾ.ಸ್ವಾಮಿನಾಥನ್ ವರದಿ ಜಾರಿಗೆ ಅಗ್ರಹಿಸಿ ರೈತರು ದೆಹಲಿ ಚಲೋ ಹಮ್ಮಿಕೊಂಡಿದ್ದಾರೆ. ಇದನ್ನು ತಡೆಯಲು ರೈತರ ಮೇಲೆ ಲಾಠಿ ಪ್ರಹಾರ, ರಬ್ಬರ್ ಬುಲೆಟ್, ರಾತ್ರಿ ರಸ್ತೆ ಮೇಲೆ ಮಲಗಿದ ರೈತರ ಮೇಲೊ ಆಶ್ರುವಾಯು ಸಿಡಿಸಿರುವುದು ಭಯಾನಕವಾಗಿದೆ. ಕೇಂದ್ರ ಸರ್ಕಾರ ತಕ್ಷಣ ರೈತರ ಮೇಲಿನ ದೌರ್ಜನ್ಯ ನಿಲ್ಲಿಸಿ ಮನವಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಈ ಪ್ರತಿಭಟನೆಗೆ ಸಿಐಟಿಯು ಬಿಸಿಯೂಟ ತಯಾರಕರು ಬೆಂಬಲ ನೀಡಿದರು.