ದಾವಣಗೆರೆ: 'ಭತ್ತದ ಕಣಜ' ಪ್ರಸಿದ್ಧಿಯ ದಾವಣಗೆರೆಯ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಲೆಯಲ್ಲಿ ಹಾವು-ಏಣಿ ಆಟ ಶುರುವಾಗಿದೆ. ಈ ಬಾರಿ ಉತ್ತಮ ಮಳೆಯಾಗಿದ್ದು, ಇಳುವರಿಯೂ ಚೆನ್ನಾಗಿದೆ. ಅದರೆ, ಬೆಲೆ ನೆಲಕಚ್ಚಿದ್ದು, ರೈತರು ಕಂಗಾಲಾಗಿದ್ದಾರೆ. ಕೆಲ ರೈತರು ಇ-ಟೆಂಡರ್ ಕರೆಯುವಂತೆ ಪಟ್ಟು ಹಿಡಿದಿದ್ದು, ಮತ್ತೆ ಕೆಲವರು ಭತ್ತದ ಖರೀದಿ ಕೇಂದ್ರಗಳನ್ನು ತೆರೆದು ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ.
ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ 1.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಪ್ರತಿ ಬೆಳೆಗೆ 4.5 ಲಕ್ಷ ಮೆಟ್ರಿಕ್ ಟನ್ ಭತ್ತ ಇಳುವರಿ ಬರುತ್ತದೆ. ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಇಳುವರಿ ಹೆಚ್ಚು. ಆದರೆ, ಬೆಲೆ ಮಾತ್ರ ಉತ್ಸಾಹವನ್ನು ಕಸಿದುಕೊಂಡಿದೆ ಎಂದು ರೈತರು ಬೇಸರ ಹೊರಹಾಕಿದ್ದಾರೆ.
ದಾವಣಗೆರೆಯಲ್ಲಿ ಈ ಹಿಂದೆ ರೈತರು ಒಂದು ಕ್ವಿಂಟಲ್ ಭತ್ತವನ್ನು 2,670 ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಇದೀಗ 1,800ರಿಂದ 2,230ರ ತನಕ ಬೆಲೆ ಇಳಿದಿರುವುದು ರೈತರ ನಿದ್ದೆಗೆಡಿಸಿದೆ. ವಾರದ ಹಿಂದೆ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಗರಿಷ್ಠ 3,300, ಕನಿಷ್ಠ 2,600 ದರ ಇತ್ತು. ಇದೀಗ ಕ್ವಿಂಟಾಲ್ಗೆ 1,800-2,300ಗೆ ಇಳಿದಿದೆ. ಕಳೆದ 15 ದಿನಗಳ ಹಿಂದೆಯೇ ಭತ್ತದ ಕಟಾವು ಆರಂಭವಾಗಿದೆ. ಕಟಾವು ಪೂರ್ಣಗೊಳ್ಳಲು ಕೆಲವು ದಿನಗಳು ಮಾತ್ರ ಬಾಕಿ ಇದ್ದು, ಇದೀಗ ದಿಢೀರ್ ದರ ಕುಸಿದಿದೆ. ಕಳೆದ ವರ್ಷ 7,38,144 ಕ್ವಿಂಟಲ್ ಭತ್ತ ಮಾರುಕಟ್ಟೆಗೆ ಬಂದಿತ್ತು. ಈ ಬಾರಿ ಸುಮಾರು 8 ಲಕ್ಷ ಕ್ವಿಂಟಲ್‌ನಷ್ಟು ಭತ್ತ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಈ ಪೈಕಿ ಅದಾಗಲೇ 1 ಲಕ್ಷ ಕ್ವಿಂಟಲ್‌ಗೂ ಅಧಿಕ ಭತ್ತ ಮಾರುಕಟ್ಟೆಗೆ ಬಂದಿದೆ. ಇನ್ನೊಂದು ವಾರದಲ್ಲಿ ಬಹುತೇಕ ಭತ್ತ ಮಾರುಕಟ್ಟೆಗೆ ಬರಲಿದೆ. ಈ ಸಮಯದಲ್ಲಿ ಭತ್ತದ ಬೆಲೆ ಇಳಿಮುಖ ಆಗಿರುವುದು ಆತಂಕ ತರಿಸಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಇ-ಟೆಂಡರ್ ಮೂಲಕ ಭತ್ತ ಖರೀದಿಗೆ ಮನವಿ: ಭತ್ತದ ದರ ಕುಸಿತವಾಗಿದ್ದರಿಂದ ಕೆಲವು ರೈತರು ಇ-ಟೆಂಡರ್ ಮೂಲಕ ಭತ್ತ ಖರೀದಿಸುವಂತೆ ಮನವಿ ಮಾಡುತ್ತಿದ್ದಾರೆ. ಇನ್ನು ಕೆಲವರು ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಬೇಡಿಕೆಯಿಟ್ಟಿದ್ದಾರೆ.
ರೈತ ಮುಖಂಡ ಸತೀಶ್ ಕೊಳೇನಹಳ್ಳಿ ಪ್ರತಿಕ್ರಿಯಿಸಿ, "ಕಳೆದ ಬಾರಿ ಬರ ಇತ್ತು. ನೀರಿಲ್ಲದೇ ಗದ್ದೆ ಬೀಳು ಬಿಟ್ಟಿದ್ದೆವು. ಈ ಬಾರಿ ಒಳ್ಳೆ ಮಳೆ ಆಗಿದೆ. ಇಳುವರಿ ಬಂದಿದೆ. ಆದರೆ ಬೆಲೆ ಕಡಿಮೆ ಆಗ್ತಿದೆ. ಕಳೆದ ಬಾರಿ 3,080ಕ್ಕೆ ಒಂದು ಕ್ವಿಂಟಲ್ ಮಾರಾಟ ಆಗಿತ್ತು. ಒಂದು ವರ್ಷದ ನಂತರ 1,800ರಿಂದ 2,230ರೂ. ಒಂದು ಕ್ವಿಂಟಲ್‌ಗೆ ಬೆಲೆ ಕಡಿಮೆ ಆಗಿದೆ. ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ತೆರೆಯಬೇಕು. 2,320 ಬೆಂಬಲ ಬೆಲೆ ಇದೆ. ರಾಜ್ಯ ಸರ್ಕಾರ ನೀಡುವ 600 ಸೇರಿ ಒಟ್ಟು 2,920ರಂತೆ ಭತ್ತ ಖರೀದಿ ಮಾಡ್ಬೇಕು" ಎಂದು ಹೇಳಿದರು.