ಹಾವೇರಿ:ಹಾವೇರಿಯಲ್ಲಿ ಗೋಲಿಬಾರ್ ನಡೆದು ಇಂದಿಗೆ 17 ವರ್ಷ. ಈ ಹಿನ್ನೆಲೆಯಲ್ಲಿ ರೈತರು ರೈತ ಹುತಾತ್ಮ ದಿನಾಚರಣೆ ಆಚರಿಸಿದರು. 2008 ಜೂನ್ 10ರಂದು ನಡೆದ ಗೋಲಿಬಾರ್ನಲ್ಲಿ ಹುತಾತ್ಮರಾದ ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನತ್ತಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪ್ರಾರ್ಥನೆ ಸಲ್ಲಿಸಿದರು. ನಂತರ ಬಸ್ ನಿಲ್ದಾಣದ ಬಳಿ ಇರುವ ರೈತ ಹುತಾತ್ಮ ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು.
ಈ ವರ್ಷದಿಂದ ರೈತ ಹುತಾತ್ಮ ದಿನವನ್ನು ಹೋರಾಟದ ದಿನವನ್ನಾಗಿ ಆಚರಿಸುವುದಾಗಿ ತಿಳಿಸಿದ ರೈತರು, ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟಿಸಿ ಜಿಲ್ಲೆಯಲ್ಲಿ ಈ ವರ್ಷವೂ ಸಹ ಗೊಬ್ಬರ, ಬಿತ್ತನೆ ಬೀಜದ ಸಮಸ್ಯೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ, ''ಗೊಬ್ಬರ ಕೇಳಲು ಬಂದ ರೈತನ ಮೇಲೆ ಗೋಲಿಬಾರ್ ನಡೆಸಿದ್ದಾರೆ. ಹೀಗಾಗಿ ಇವತ್ತು ಹುತಾತ್ಮ ರೈತರ ದಿನದೊಂದಿಗೆ ಹೋರಾಟ ದಿನವನ್ನಾಗಿ ಮಾಡಿದ್ದೇವೆ. ಜಿಲ್ಲಾಧಿಕಾರಿಗೆ ಮನವಿ ಕೊಟ್ಟಿದ್ದೇವೆ. ನಮಗೆ ಬೆಳೆ ವಿಮೆಯಲ್ಲಿ ಮೋಸವಾಗಿದೆ. ಕೇಂದ್ರದಿಂದ ಬಂದ ಪರಿಹಾರವನ್ನು ಮಾತ್ರ ನೀಡಿದ್ದೀರಿ. ರಾಜ್ಯ ಸರ್ಕಾರದಿಂದ ಏನೂ ಕೊಟ್ಟಿಲ್ಲ. ಎನ್ಡಿಆರ್ಎಫ್ ಕೊಟ್ಟಿದ್ದೀರಿ, ಎಸ್ಡಿಆರ್ಎಫ್ ಕೊಟ್ಟಿಲ್ಲ. ಗೊಬ್ಬರಕ್ಕೆ ಬಂದ ರೈತರಿಗೆ ಲಿಂಕ್ ಮಾಡಿ, ಅವಶ್ಯಕವಿಲ್ಲದ ಗೊಬ್ಬರ ಖರೀದಿಸಲು ಒತ್ತಾಯಿಸಲಾಗುತ್ತಿದೆ. ಹೀಗೆ ಮಾಡಬೇಡಿ. ರೈತ ಯಾವುದನ್ನು ಕೇಳುತ್ತಾನೆ ಅದನ್ನು ಕೊಡಿ. ಇದಿಷ್ಟು ನಮ್ಮ ಬೇಡಿಕೆಗಳು'' ಎಂದರು.