ಹಾವೇರಿ :ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಕೆರೆ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದು. ಸುಮಾರು 370 ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ಅವಲಂಬಿಸಿ, ನಾಲ್ಕು ನೂರು ಎಕರೆಯಲ್ಲಿ ಅಡಕೆ, ವಿಳ್ಯದೆಲೆ, ಭತ್ತ ಬೆಳೆಯಲಾಗುತ್ತದೆ. ಆದರೆ, ಪ್ರಸ್ತುತ ವರ್ಷ ಬರಗಾಲದ ಹಿನ್ನೆಲೆಯಲ್ಲಿ ಕೆರೆ ಖಾಲಿ ಖಾಲಿಯಾಗಿದೆ.
ಕೆರೆಯ ದಂಡೆಯ ಕೆಳಗಿರುವ ಅಡಕೆ, ವಿಳ್ಯದೆಲೆ ತೋಟಗಳು ಒಣಗಲಾರಂಭಿಸಿವೆ. ಕೊಳವೆಬಾವಿಗಳನ್ನು ಆಶ್ರಯಿಸಿ ಬೆಳೆದಿರುವ ರೈತರು, ಕೊಳವೆ ಬಾವಿ ಯಾವಾಗ ಬಂದಾಗುತ್ತವೆ ಎಂದು ಆತಂಕದಲ್ಲಿದ್ದಾರೆ. ಈ ಮಧ್ಯೆ ನರೇಗಲ್ ಕೆರೆಯನ್ನು ಸಂಪೂರ್ಣವಾಗಿ ಹೂಳು ತೆಗೆದು ನೀರು ತುಂಬಿಸಿದರೆ ಎಂತಹ ಬರಗಾಲ ಸಹ ಎದುರಿಸಬಹುದು ಎನ್ನುತ್ತಾರೆ ನರೇಗಲ್ ಗ್ರಾಮದ ರೈತರು.
ಕೆರೆ ಸ್ವಚ್ಛಗೊಳಿಸಿ ಹೂಳು ತೆಗೆದು ತುಂಬಿಸಿದರೆ, ಎರಡು ವರ್ಷಗಳ ಕಾಲ ನಮಗೆ ನೀರಿನ ಕೊರತೆಯಾಗುವುದಿಲ್ಲ. ಆದರೆ
ಕಳೆದ ಮೂರು ವರ್ಷಗಳಿಂದ ಈ ಕುರಿತಂತೆ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿಯ ರೈತರು. ಇದರಿಂದ ತೀವ್ರ ಹತಾಶರಾಗಿರುವ ನರೇಗಲ್ ಗ್ರಾಮದ ರೈತರು, ಇದೀಗ ತಾವೇ ಹಣ ಕೂಡಿಸಿ ಕೆರೆಯ ಹೂಳು ಎತ್ತುತ್ತಿದ್ದಾರೆ. ಹತ್ತಾರು ಟ್ರ್ಯಾಕ್ಟರ್ಗಳು ಮತ್ತು ಒಂದು ಜೆಸಿಬಿಯಿಂದ ಕೆರೆ ಶುಚಿಗೊಳಿಸಿ, ಅದರಿಂದ ಕೆರೆ ಹೂಳನ್ನು ಜಮೀನುಗಳಿಗೆ, ತಗ್ಗುಗುಂಡಿಗಳಿಗೆ ಮುಚ್ಚುತ್ತಿದ್ದಾರೆ.
ಈ ಕೆರೆ ಭರಪೂರ ತುಂಬಿದರೆ ನರೇಗಲ್, ಕೂಡಲ, ವರದಿ, ಸಂಗೂರು, ಕುಳೇನೂರು ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಕೊಳವೆ ಬಾವಿಗಳು ತುಂಬುತ್ತವೆ. ಆದರೆ, ಕೆರೆ ತುಂಬಲು ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಕೆರೆಯಿಂದ ಎರಡು ಕಿ. ಮೀ ದೂರದಲ್ಲಿ ವರದಾ ನದಿ ಹರಿಯುತ್ತದೆ. ಮಳೆಗಾಲದಲ್ಲಿ ಅಲ್ಲಿಂದ ನೀರು ಪಂಪ್ ಮಾಡಿ ಕೆರೆ ತುಂಬಿಸಬಹುದು. ಆದರೆ ಈ ಕಡೆ ಯಾರೂ ಗಮನ ನೀಡುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.