ಕರ್ನಾಟಕ

karnataka

ETV Bharat / state

ಕೃಷಿಗೂ ಬಂತು AI ತಂತ್ರಜ್ಞಾನ; ಬೆಳೆ ನಿರ್ವಹಣೆಗೆ ಸಿಗಲಿದೆ ಉಪಯುಕ್ತ ಮಾಹಿತಿ - AI IN AGRICULTURE

ಕೊಪ್ಪಳ ಜಿಲ್ಲೆಯ ರೈತರು ತಮ್ಮ ತೋಟಗಳಿಗೆ ಸ್ವಯಂಚಾಲಿತ ಹವಾಮಾನ ಮುನ್ಸೂಚನಾ ಘಟಕವನ್ನು ಅಳವಡಿಸಿಕೊಂಡಿದ್ದಾರೆ. ಈಟಿವಿ ಭಾರತದ ಪ್ರತಿನಿಧಿ ಜಗದೀಶ್ ಚಟ್ಟಿ ವಿಶೇಷ ವರದಿ.

automated-weather-forecasting-unit
ಸ್ವಯಂಚಾಲಿತ ಹವಾಮಾನ ಮುನ್ಸೂಚನಾ ಘಟಕ (ETV Bharat)

By ETV Bharat Karnataka Team

Published : Feb 10, 2025, 5:07 PM IST

Updated : Feb 10, 2025, 6:56 PM IST

ಕೊಪ್ಪಳ:ಇಂದಿನ ದಿನಗಳಲ್ಲಿ ಮಾಧ್ಯಮ, ಸಿನಿಮಾ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ ವಿಶೇಷ ಚಾಪು ಮೂಡಿಸುತ್ತಿದೆ. ಇದೀಗ ಕೃಷಿ ಕ್ಷೇತ್ರದಲ್ಲೂ ಎಐ ಅಬ್ಬರ ಶುರುವಾಗಿದೆ. ಜಿಲ್ಲೆಯ ರೈತರ ತೋಟಗಳಿಗೆ ಸ್ವಯಂಚಾಲಿತ ಹವಾಮಾನ ಮುನ್ಸೂಚನಾ ಘಟಕ ಕಾಲಿಟ್ಟಿದೆ.

ಹವಾಮಾನ ವೀಕ್ಷಣಾ ಯಂತ್ರ ಹೇಗೆ ಕೆಲಸ ಮಾಡುತ್ತದೆ?: ರೈತರಿಗೆ ಪ್ರತಿದಿನದ ವಾತಾವರಣದಲ್ಲಿನ ತೇವಾಂಶ, ಉಷ್ಣಾಂಶ, ಗಾಳಿಯ ಆದ್ರತೆ, ಒತ್ತಡ, ವೇಗ, ದಿಕ್ಕು, ಮಳೆಯ ಪ್ರಮಾಣ, ಮಣ್ಣಿನ ತೇವಾಂಶ ಹಾಗೂ ಉಷ್ಣತೆಯ ಜೊತೆಗೆ, ಎಲೆಗಳ ಮೇಲಿನ ತೇವ ಮತ್ತು ಬೆಳಕಿನ ತೀವ್ರತೆಯಂತಹ ಮಾಹಿತಿಯನ್ನು ಸ್ವಯಂಚಾಲಿತ ಹವಾಮಾನ ಮುನ್ಸೂಚನಾ ಘಟಕ ನಿಖರವಾಗಿ ಒದಗಿಸುತ್ತದೆ. ಮೊಬೈಲ್ ಆ್ಯಪ್ ಮೂಲಕ ಯಂತ್ರವನ್ನು ರೈತರ ಮೊಬೈಲ್​ನೊಂದಿಗೆ ಜೋಡಿಸಲಾಗುತ್ತದೆ. ಇದರಿಂದ ಯಂತ್ರದಲ್ಲಿ ದಾಖಲಾಗುವ ಎಲ್ಲ ಮಾಹಿತಿ ರೈತನ ಮೊಬೈಲ್​​ಗೆ ಮೆಸೇಜ್ ಮೂಲಕ ರವಾನೆಯಾಗುತ್ತದೆ.

ಸ್ವಯಂಚಾಲಿತ ಹವಾಮಾನ ಮುನ್ಸೂಚನಾ ಘಟಕದ ಬಗ್ಗೆ ರೈತ ಸುರೇಶ ಸಜ್ಜನ್ ಹಾಗೂ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ್ ಮಾತನಾಡಿದರು. (ETV Bharat)

ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುತ್ತಿರುವ ರೈತರು ಈಗಾಗಲೇ ಎಐ ತಂತ್ರಜ್ಞಾನದ ಮೊರೆ ಹೋಗಿದ್ದು, ‌ಯಂತ್ರವನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಿದ್ದಾರೆ. ಒಂದು ಯೂನಿಟ್ (ಘಟಕ) ಅಳವಡಿಸಿದರೆ ಸುತ್ತಲಿನ ಸುಮಾರು 20 ಎಕರೆಯ ಬಗ್ಗೆ ಈ ಯಂತ್ರ ಮಾಹಿತಿ ನೀಡುತ್ತದೆ ಎಂದು ಯಂತ್ರ ತಯಾರಕ ಕಂಪೆನಿ ಹೇಳಿಕೊಂಡಿದೆ. ಹವಾಮಾನ ವೀಕ್ಷಣಾ ಯಂತ್ರಗಳ ತಯಾರಿಕೆಯಲ್ಲಿ ಸಾಕಷ್ಟು ಕಂಪೆನಿಗಳು ತೊಡಗಿವೆ. ಸೋಲಾರ್ ವಿದ್ಯುತ್ ಶಕ್ತಿ ಆಧರಿಸಿ ಈ ಯಂತ್ರ ಕೆಲಸ ನಿರ್ವಹಿಸುತ್ತದೆ.

ಹವಾಮಾನ ಮುನ್ಸೂಚನಾ ಘಟಕ (ETV Bharat)

ತೋಟಗಾರಿಕೆ ಇಲಾಖೆಯಿಂದ ಶೇ.50ರಷ್ಟು ಸಹಾಯಧನ:ಬೆಳೆಯ ಬಗ್ಗೆ ಮಾಹಿತಿ ನೀಡುವ ಯಂತ್ರ ಅಳವಡಿಸಿಕೊಳ್ಳುವ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ನೀಡಲಾಗುತ್ತಿದೆ. ಒಂದು ಘಟಕದ ವೆಚ್ಚ 40 ಸಾವಿರ ರೂ ಇದ್ದು, ಇಲಾಖೆ 20 ಸಾವಿರ ರೂ. ಸಹಾಯಧನ ನೀಡುತ್ತದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಬ್ಸಿಡಿ ನೀಡಲಾಗುತ್ತದೆ. ಇದರಿಂದ ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ತೋಟಗಾರಿಕೆ ಬೆಳೆ ಬೆಳೆಯುವ ರೈತರು ಯೋಜನೆಯ ಲಾಭ ಪಡೆಯುತ್ತಿದ್ದಾರೆ.

ಕೃಷಿ ಭೂಮಿಯಲ್ಲಿ ಸ್ವಯಂಚಾಲಿತ ಹವಾಮಾನ ಮುನ್ಸೂಚನಾ ಘಟಕ ಅಳವಡಿಸಿರುವುದು. (ETV Bharat)

ತೋಟಗಾರಿಕೆ ಬೆಳೆಗೆ ಹೆಚ್ಚು ಅನುಕೂಲ: ಹವಾಮಾನ ಬದಲಾವಣೆಯಿಂದ ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ದ್ರಾಕ್ಷಿ, ಮಾವು ಹಾಗೂ ಬಾಳೆಗೆ ಸಾಕಷ್ಟು ಹಾನಿಯಾಗಲಿದೆ. ದ್ರಾಕ್ಷಿ ಬೆಳೆಗಂತೂ ಸ್ವಲ್ಪ ಹವಾಮಾನ ವ್ಯತ್ಯಾಸವಾದರೂ ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ. ಇದೆಲ್ಲದಕ್ಕೂ ಈ ಹವಾಮಾನ ವೀಕ್ಷಣಾ ಯಂತ್ರ ಪರಿಹಾರ ನೀಡಲಿದೆ ಎಂದು ರೈತರು ಹೇಳುತ್ತಿದ್ದಾರೆ.

ಹವಾಮಾನ ಮುನ್ಸೂಚನಾ ಘಟಕದ ಬಗ್ಗೆ ರೈತರಿಗೆ ಮಾಹಿತಿ (ETV Bharat)

ರೈತ ಸುರೇಶ್ ಸಜ್ಜನ್ ಮಾತನಾಡಿ, ''ತೋಟಗಾರಿಕೆ ಇಲಾಖೆಯವರು ಹವಾಮಾನ ಯಂತ್ರದ ಬಗ್ಗೆ ಮಾಹಿತಿ ಕೊಟ್ಟಿದ್ದರು. ಇದು ಒಳ್ಳೆಯ ಸಾಧನ. ನಾನು 10 ಎಕರೆ ದಾಳಿಂಬೆ ಬೆಳೆದಿದ್ದೇನೆ. ನಮಗೆ ಯಾವಾಗ ರಸಗೊಬ್ಬರ ಕೊಟ್ಟಿದ್ದೇವೆ ಎಂಬುದು ಗೊತ್ತಿರಲ್ಲ. ಯಾವ ದಿಕ್ಕಿಗೆ ಗಾಳಿ ಬರುತ್ತೆ ಎಂಬುದು ಗೊತ್ತಿರಲ್ಲ. ಈ ಯಂತ್ರದಿಂದ ಮಳೆ ಮುನ್ಸೂಚನೆ, ರಸಗೊಬ್ಬರ ನಿರ್ವಹಣೆ ತಿಳಿಯುತ್ತೆ. ಇಂತಹ ಯಂತ್ರವನ್ನು ಅಳವಡಿಸಿಕೊಳ್ಳುವುದರಿಂದ ಮುಂದೆ ಬರುವ ಕೀಟ ಬಾಧೆ, ರೋಗ ನಿರ್ವಹಣೆ, ನೀರಿನ ನಿರ್ವಹಣೆ ಸಾಧ್ಯ'' ಎಂದರು.

ಯಂತ್ರದಲ್ಲಿ ದಾಖಲಾಗುವ ಮಾಹಿತಿ ಮೊಬೈಲ್​ಗೆ ಮೆಸೇಜ್​ ಮೂಲಕ ರವಾನೆ (ETV Bharat)

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ್ ಮಾತನಾಡಿ, ''ರೈತರು ತಮ್ಮ ಹೊಲದಲ್ಲಿ ಐಎ ಸೆನ್ಸಾರ್​ ಆಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು. ಇದರಿಂದ ಮುಂದಿನ 15 ದಿನಗಳವರೆಗಿನ ಹವಾಮಾನ ಮುನ್ಸೂಚನೆ ತಿಳಿಯುತ್ತೆ. ಬೆಳೆಗೆ ಯಾವುದಾದರೂ ರೋಗ ಬರುವುದಿದ್ದರೆ ಅದಕ್ಕೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸುತ್ತೆ, ಅದಕ್ಕೆ ಯಾವ ಕೀಟನಾಶಕ ಬಳಸಬೇಕು ಎಂಬುದನ್ನ ತಿಳಿಸಿಕೊಡುತ್ತೆ. ಮಣ್ಣಿನಲ್ಲಿರುವ ಆರ್ದ್ರತೆಯನ್ನು ಹೇಳುತ್ತೆ. ತೇವಾಂಶ ಎಷ್ಟಿದೆ, ನೀರು ಎಷ್ಟು ಕೊಡಬೇಕು ಎಂಬುದನ್ನ ತೋರಿಸುತ್ತದೆ'' ಎಂದು ಹೇಳಿದರು.

ಇದನ್ನೂ ಓದಿ:ಟ್ರಾಫಿಕ್‌ನಲ್ಲಿ ಅನಗತ್ಯ ಕಾಯುವಿಕೆಗೆ ಬ್ರೇಕ್​: ಬೆಂಗಳೂರಿನಲ್ಲಿ AI ಸಿಗ್ನಲ್‌ಗಳ ಅಳವಡಿಕೆ - AI BASED SIGNALS IN BENGALURU

Last Updated : Feb 10, 2025, 6:56 PM IST

ABOUT THE AUTHOR

...view details