ದಾವಣಗೆರೆ:ಪ್ರಸ್ತುತ ದಿನಗಳಲ್ಲಿ ಭೀಕರ ಬರದಿಂದಾಗಿ ರೈತ ತತ್ತರಿಸಿದ್ದಾನೆ. ಆಗಾಗ್ಗೆ ಮಳೆ ಕೈಕೊಟ್ಟು ಬೆಳೆ ಕೈ ಸಿಗದೇ ಅನ್ನದಾತ ಆರ್ಥಿಕ ಹೊಡೆತಕ್ಕೆ ಸಿಲುಕಿ ಕಂಗೆಟ್ಟಿದ್ದಾನೆ. ಅದರೆ ದಾವಣಗೆರೆ ಜಿಲ್ಲೆಯ ರೈತನೊಬ್ಬನು ನೀರು, ಗೊಬ್ಬರವಿಲ್ಲದೇ, ಸಾವಯವದಲ್ಲಿ ವಿವಿಧ ಬೆಳೆ ಬೆಳೆದು ಯಶಸ್ಸು ಕಂಡಿದ್ದಾನೆ. ಲಾಭ ತರುವ ಬೆಳೆ ಕಂಡುಕೊಂಡ ರೈತ ತನ್ನ ಆಡಕೆ ತೋಟದಲ್ಲಿ ಮಿಶ್ರಬೆಳೆಯಾಗಿ ವಿವಿಧ ಬೆಳೆ ಬೆಳೆದು ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾನೆ. ಅದರಲ್ಲಿಯೂ ಕೋ ಕೋ ಮಿಶ್ರಬೆಳೆಯಾಗಿ ಬೆಳೆದು ಇನ್ನಿತರ ರೈತರು ಬೆಳೆಯುವಂತೆ ಮಾದರಿ ಆಗಿದ್ದಾನೆ.
ಅಡಿಕೆ ತೋಟದಲ್ಲಿ ಮಿಶ್ರಬೆಳೆ ಕೋಕೋ:ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಬಹುತೇಕ ರೈತರು ಅಡಿಕೆ ಬೆಳೆಯುತ್ತಾರೆ. ಇದೇ ತಾಲೂಕಿನ ಕಾರಿಗನೂರು ಗ್ರಾಮದ ರೈತ ರುದ್ರೇಶ ಎಂಬುವರು ಸಾವಯವದಲ್ಲಿ ತಮ್ಮ ಒಂದು ಎಕರೆ ಅಡಕೆ ತೋಟದಲ್ಲಿ ಮಿಶ್ರಬೆಳೆಯಾಗಿ ಕೋಕೋ' ಬೆಳೆದು ಯಶಸ್ಸು ಕಂಡಿದ್ದಾರೆ.
ಚಾಕೊಲೇಟ್ನಲ್ಲಿ ಹೆಚ್ಚು ಉಪಯೋಗ ಆಗುವ 'ಕೋಕೋ' ಬೆಳೆಯಿಂದ ಪ್ರತಿವರ್ಷವೂ 1.50 ಲಕ್ಷ ರೂಪಾಯಿ ಲಾಭವನ್ನು ರೈತ ರುದ್ರೇಶ್ ಗಳಿಸುತ್ತಿದ್ದಾರೆ. ಒಂದು ಎಕರೆ ಅಡಕೆ ತೋಟದಲ್ಲಿ ಕಳೆದ 09 ವರ್ಷಗಳಿಂದ ಮಿಶ್ರ ಬೆಳೆಯಾಗಿ ರುದ್ರೇಶ್ ಕೋಕೋ ಬೆಳೆಯುತ್ತಿದ್ದು, ಆರಂಭದಲ್ಲಿ ನಷ್ಟ ಅನುಭವಿಸಿದ್ದರೂ, ಛಲ ಬಿಡದೆ ಕೋಕೋ ಬೆಳೆ ಬೆಳೆಯುವುದನ್ನು ಮುಂದುವರೆಸಿದರು.
ಈ ಬೆಳೆಗೆ ನೀರು, ಗೊಬ್ಬರವಿಲ್ಲದೇ ಕೇವಲ ಸಾವಯವದಲ್ಲಿ ಕೋಕೋವನ್ನು ಬೆಳೆದಿದ್ದಾರೆ. ಇಲ್ಲಿಯ ತನಕ 13-14 ಬೆಳೆ ಕಂಡಿರುವ ರುದ್ರೇಶ್ ಇಂದಿಗೂ ಲಕ್ಷಾಂತರ ರೂಪಾಯಿ ಲಾಭ ಪಡೆಯುತ್ತಿದ್ದಾರೆ. ಆರಂಭದಲ್ಲಿ ಎಕರೆಗೆ ಕೇವಲ 6 ಚೀಲ ಫಸಲು ಬರುತ್ತಿತ್ತು, ಇದೀಗ ಎಕರೆಗೆ 28 ಚೀಲ ಬರುತ್ತಿದೆ ಎಂದು ರೈತ ರುದ್ರೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.
'ಕೋಕೋ' ಜತೆ ವಿವಿಧ ಹಣ್ಣು ಬೆಳೆದ ರುದ್ರೇಶ್:ರುದ್ರೇಶ್ ರವರು ಬಾಲ್ಯದಿಂದಲೇ ಕೃಷಿಯನ್ನೇ ಜೀವನಾಧಾರವಾಗಿ ಮಾಡಿಕೊಂಡು ಬಂದಿದ್ದಾರೆ. ರುದ್ರೇಶ್ 5 ಎಕರೆ ಜಮೀನು ಹೊಂದಿದ್ದು, ಎಕರೆಯಲ್ಲಿ ಕೋಕೋ ಬೆಳೆದಿದ್ದಾರೆ. ಉಳಿದ ಜಮೀನಿನಲ್ಲಿ ಅಡಿಕೆ, ಹಲಸು, ಮಾವು, ಸಪೋಟ, ರಾಮ್ ಫಲ, ಲಕ್ಷ್ಮಣ ಫಲ, ನಿಂಬೆಹಣ್ಣು, ಬಾಳೆ ಹೀಗೆ ವಿವಿಧ ಹಣ್ಣುಗಳನ್ನು ಸಾವಯವ ಕೃಷಿಯಲ್ಲಿ ಬೆಳೆದಿದ್ದಾರೆ. ಒಂದು ಎಕರೆಯಲ್ಲಿ ಅಡಕೆ ತೋಟ ಮಾಡಿಕೊಂಡಿದ್ದ ರೈತ ರುದ್ರೇಶ್ ಮತ್ತೊಂದು ಎಕರೆಗೂ ಈಗ ಅಡಕೆ ನಾಟಿ ಮಾಡಿದ್ದಾರೆ. ಉಳಿದ 3 ಎಕರೆಯಲ್ಲಿ ಸಾವಯವ ಗೊಬ್ಬರ ಬಳಸಿ ಭತ್ತ ಬೆಳೆದಿದ್ದು, ಅದೇ ಭತ್ತವನ್ನು ಅಕ್ಕಿಯನ್ನಾಗಿ ಮಾಡಿಸಿ ತಾವೇ ಸ್ವತಃ ಮಾರಾಟ ಮಾಡುತ್ತಿದ್ದಾರೆ.