ಬೆಂಗಳೂರು:ಇತ್ತೀಚಿಗೆ ಪಂಚೆ ಉಟ್ಟಿದ್ದ ರೈತನಿಗೆ ಜಿಟಿ ಮಾಲ್ ಅಪಮಾನ ಮಾಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಮಾಲ್‌ಗಳಿಗೆ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ಬಿಬಿಎಂಪಿ ವ್ಯಾಪ್ತಿಗೆ ಬರುವ ಎಲ್ಲಾ ವಾಣಿಜ್ಯ ಸಮುಚ್ಚಯಗಳು ಹಾಗೂ ಇತರ ಅಂಗಡಿಗಳ ಮಾಲೀಕರಿಗೆ ಮಾರ್ಗಸೂಚಿ ಹೊರಡಿಸಲಾಗಿದೆ. ಸಾರ್ವಜನಿಕರಿಗೆ ಪ್ರವೇಶ ಸಂದರ್ಭದಲ್ಲಿ ಭಾಷೆ, ಜಾತಿ, ಜನಾಂಗ, ಧರ್ಮ, ಉಡುಪು ಮತ್ತು ಜನ್ಮಸ್ಥಳ ಆಧಾರದಲ್ಲಿ ತಾರತಮ್ಯ ಮಾಡಬಾರದು ಎಂದು ಎಚ್ಚರಿಕೆ ನೀಡಿದೆ.
ಎಲ್ಲ ವಾಣಿಜ್ಯ ಸಮುಚ್ಚಯಗಳು ಉಡುಪಿನ ಆಧಾರದ ಮೇಲೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಣೆ ಮಾಡದಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಬೇಕು. ರೈತನಿಗೆ ಅಪಮಾನ ಮಾಡಿದ ರೀತಿಯ ಪ್ರಕರಣಗಳು ಮರುಕಳಿಸಿದರೆ ಪರವಾನಗಿ ರದ್ದುಗೊಳಿಸಲಾಗುವುದು. ಜೊತೆಗೆ ಭಾರತೀಯ ನ್ಯಾಯ ಸಂಹಿತೆ ಅಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಘಟನೆಯ ವಿವರ:ಹಾವೇರಿ ಮೂಲದ ನಾಗರಾಜ್ ಎನ್ನುವರು ಜುಲೈ 16ರಂದು ತಮ್ಮ ತಂದೆ - ತಾಯಿಗೆ ಸಿನಿಮಾ ತೋರಿಸಲು ಬೆಂಗಳೂರಿನ ಮಾಗಡಿ ರಸ್ತೆ ಜಿಟಿ ಮಾಲ್ ಕರೆದೊಯ್ದಿದ್ದಾರೆ. ಆದರೆ, ನಾಗರಾಜ್ ತಂದೆ ಪಂಚೆ ಹಾಕಿಕೊಂಡು ತಲೆಗೆ ಪಟಗ ಸುತ್ತಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಅವರನ್ನು ಮಾಲ್ ಒಳಗೆ ಪ್ರವೇಶಿಸಲು ನಿರಾಕರಿಸಿದ್ದರು. ಒಳಗೆ ಬಿಡಿ ಎಂದು ಪುತ್ರ ನಾಗರಾಜ್ ಎಷ್ಟು ಬಾರಿ ಕೇಳಿದರೂ, 'ಪಂಚೆ ಹಾಕೊಂಡಿದ್ದಾರೆ, ಮಾಲ್ನಲ್ಲಿ ಪಂಚೆ ಹಾಕಿದವರನ್ನು ಬಿಡುವುದಿಲ್ಲ' ಎಂದು ಸಿಬ್ಬಂದಿ ನಿರಾಕರಿಸಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೇ ಸದನದಲ್ಲೂ ಕೂಡ ಈ ವಿಷಯ ಚರ್ಚೆಗೆ ಬಂದಿತ್ತು. ಸಚಿವ ಬೈರತಿ ಸುರೇಶ್ ಒಂದು ವಾರ ಜಿಟಿ ಮಾಲ್ ಬಂದ್ ಮಾಡಿಸುವುದಾಗಿ ಘೋಷಿಸಿದ್ದರು.