ಕರ್ನಾಟಕ

karnataka

ETV Bharat / state

ಟರ್ಕಿ ದೇಶದ ಸಜ್ಜೆ ಬೆಳೆದು ಬಂಪರ್ ಲಾಭ ಪಡೆದ ಗಂಗಾವತಿ ರೈತ: ಹೊಲಕ್ಕೆ ಕೃಷಿ ಅಧಿಕಾರಿಗಳು ಭೇಟಿ - TURKEY PEARL MILLET CROPS

ಈ ಟರ್ಕಿ ಬೆಳೆಯಿಂದ ರೈತರಿಗೆ ಹೆಚ್ಚು ಪ್ರಯೋಜನವಾಗುವುದಾದರೆ, ಈ ತಳಿಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಒದಗಿಸಲಾಗುವುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

Agriculture officials visit to farm
ಹೊಲಕ್ಕೆ ಕೃಷಿ ಅಧಿಕಾರಿಗಳ ಭೇಟಿ (ETV Bharat)

By ETV Bharat Karnataka Team

Published : Oct 8, 2024, 9:20 AM IST

ಗಂಗಾವತಿ (ಕೊಪ್ಪಳ): ಟರ್ಕಿ ದೇಶದ ಸುಧಾರಿತ ತಳಿಯ ಸಜ್ಜೆ ಬೆಳೆದು ಬಂಪರ್ ಲಾಭ ಮಾಡಿಕೊಂಡಿರುವ ತಾಲೂಕಿನ ಗಡ್ಡಿ ಗ್ರಾಮದ ರೈತ ಜಿ. ಪರಮೇಶ್ವರಪ್ಪ ಸೋಮಶೇಖರಪ್ಪ ಅವರ ಹೊಲಕ್ಕೆ ಸೋಮವಾರ ಕೃಷಿ ಇಲಾಖೆ ಬೆಂಗಳೂರಿನ ನಿರ್ದೇಶಕ ಬಾಲರೆಡ್ಡಿ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಸುತ್ತಲಿನ ರೈತರು ಸ್ವದೇಶಿ ತಳಿಯ ಸಜ್ಜೆ ಬೆಳೆಯುತ್ತಿರುವಾಗ ರೈತ ಪರಮೇಶ್ವರಪ್ಪ, ತಮ್ಮ 4 ಎಕರೆ ಜಮೀನಿನಲ್ಲಿ 2 ಎಕರೆ ಸ್ವದೇಶಿ ಮತ್ತು 2 ಎಕರೆ ಟರ್ಕಿಯ ಸಜ್ಜೆ ಬೆಳೆದಿರುವುದನ್ನು ಅಧಿಕಾರಿಗಳು ಗಮನಿಸಿದರು.

ಹೊಲಕ್ಕೆ ಕೃಷಿ ಅಧಿಕಾರಿಗಳ ಭೇಟಿ (ETV Bharat)

ಈ ಬಗ್ಗೆ ಮಾತನಾಡಿದ ಬಾಲರೆಡ್ಡಿ, "ಈ ಟರ್ಕಿಯ ವಿಭಿನ್ನ ತಳಿಯ ಬೆಳೆಯನ್ನು ರೈತರು ಬೆಳೆದು ಯಶಸ್ವಿಯಾಗಿರುವ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ತಳಿಯು ನಮ್ಮ ಸ್ವದೇಶಿ ತಳಿಗಿಂತ ಭಿನ್ನವಾಗಿದೆ. ಈ ಸಜ್ಜೆ ಬೆಳೆಯು 10-11 ಅಡಿ ಎತ್ತರವಿದೆ. 4-5 ಕವಲು ಒಡೆದು ತೆನೆ ಬರುತ್ತದೆ. ತೆನೆ 2-3 ಅಡಿ ಉದ್ದವಾಗಿದ್ದು, ಕಾಳುಗಳು ಸ್ವದೇಶಿ ತಳಿಗಿಂತ ಗಟ್ಟಿಯಾಗಿವೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿವೆ. ಸ್ವದೇಶಿ ತಳಿಗಳ ಇಳುವರಿ ಎಕರೆಗೆ 8-10 ಕ್ವಿಂಟಲ್ ಬಂದರೆ, ಟರ್ಕಿ ತಳಿ ಎಕರೆಗೆ 13-15 ಕ್ವಿಂಟಲ್ ಬರಬಹುದು" ಎಂದರು.

ಉಪ ನಿರ್ದೇಶಕ ಸಹದೇವ ಯರಗೊಪ್ಪ ಮಾತನಾಡಿ, "ದೇಶದ ಆಹಾರ ಧಾನ್ಯಗಳಲ್ಲಿ ಸಜ್ಜೆಗೆ 5ನೇ ಸ್ಥಾನವಿದೆ. ಸಜ್ಜೆಯ ಮೂಲ ಆಫ್ರಿಕಾ. ಸಜ್ಜೆ, ನಮ್ಮ ರಾಜ್ಯದ ಮುಖ್ಯ ಆಹಾರ ಬೆಳೆಯಾಗಿದೆ. ಈ ಟರ್ಕಿ ಬೆಳೆಯಿಂದ ರೈತರಿಗೆ ಹೆಚ್ಚು ಉಪಯೋಗವಾಗುವುದಾದರೆ ಈ ತಳಿಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಒದಗಿಸಲಾಗುವುದು" ಎಂದರು.

ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್, ಜಾರಿದಳ ವಿಭಾಗದ ಸಹಾಯಕ ಕೃಷಿ ನಿರ್ದೇಶಕ ನಾಗರಾಜ ಕಾತರಿಕಿ, ವೆಂಕಟಗಿರಿ ಹೋಬಳಿಯ ಕೃಷಿ ಅಧಿಕಾರಿ ಹರೀಶ್ ಎಸ್.ಜಿ, ಆತ್ಮ, ಕೃಷಿ ಸಂಜೀವಿನಿ ಸಿಬ್ಬಂದಿ ಇದ್ದರು.

ಇದನ್ನೂ ಓದಿ:ಬರದ ನಾಡಲ್ಲಿ ಡ್ರ್ಯಾಗನ್‌ಫ್ರೂಟ್​ ಬೆಳೆದ ಫಾರ್ಮಾಸಿಸ್ಟ್‌; ಕೈತುಂಬಾ ಆದಾಯ ನೀಡುತ್ತಿರುವ ಹಣ್ಣಿನ ಬೆಳೆ - DRAGON FRUIT

ABOUT THE AUTHOR

...view details