ಬೆಂಗಳೂರು : ಅಕ್ರಮವಾಗಿ ನಕಲಿ ಎಂಪ್ಲಾಯ್ಮೆಂಟ್ ಸ್ಟೇಟ್ ಇನ್ಶುರೆನ್ಸ್ (ಇಎಸ್ಐ), ಇ-ಪೆಹಚಾನ್ ಕಾರ್ಡ್‌ಗಳನ್ನ ಮಾಡಿಸಿಕೊಟ್ಟು ಸರ್ಕಾರದ ಬೊಕ್ಕಸಕ್ಕೆ ವಂಚಿಸುತ್ತಿದ್ದ ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರದ ಇಎಸ್ಐ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಶ್ರೀಧರ್ ಸೇರಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ.
ಅಕ್ರಮ ಎಸಗುತ್ತಿದ್ದ ಆರೋಪದಡಿ ಇಎಸ್ಐ ಆಸ್ಪತ್ರೆ ಸೆಕ್ಯುರಿಟಿ ಗಾರ್ಡ್ ಶ್ರೀಧರ್, ಆಸ್ಪತ್ರೆಯ ಕ್ಯಾಂಟೀನ್ ಮಾಲೀಕ ರಮೇಶ್, ರಾಮಯ್ಯ ಆಸ್ಪತ್ರೆಯ ಮಾಜಿ ನೌಕರ ಶಿವಲಿಂಗ, ಮಧ್ಯವರ್ತಿ ಚಂದ್ರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ರಾಮಯ್ಯ ಆಸ್ಪತ್ರೆಯ ಮಾಜಿ ಸಿಬ್ಬಂದಿ ಶ್ವೇತಾ ಮತ್ತು ಆಡಿಟರ್ ಶಶಿಕಲಾಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.
ನಕಲಿ ಹೆಸರುಗಳಲ್ಲಿ ಭೌತಿಕವಾಗಿ ಅಸ್ತಿತ್ವದಲ್ಲಿರದ ಕಂಪನಿಗಳನ್ನು ಸರ್ಕಾರಿ ವೆಬ್‌ಸೈಟ್‌ನಲ್ಲಿ ಅವುಗಳನ್ನ ನೋಂದಣಿ ಮಾಡುತ್ತಿದ್ದರು. ಬಳಿಕ ಆಸ್ಪತ್ರೆಗೆ ಬರುವ ಆರ್ಥಿಕ ಸಂಕಷ್ಟದಲ್ಲಿರುವ ಸಾರ್ವಜನಿಕರು /ರೋಗಿಗಳಿಂದ ಹಣ ಪಡೆದು ಆ ನಕಲಿ ಕಂಪನಿಗಳಿಗೆ ಅವರನ್ನ ನೌಕರರೆಂದು ತೋರಿಸಿ ಇಎಸ್ಐ ಕಾರ್ಡ್ ಕೊಡುತ್ತಿದ್ದರು. ಪ್ರತಿಯಾಗಿ ಅವರಿಂದ 10 ಸಾವಿರದಿಂದ 2 ಲಕ್ಷದವರೆಗೂ ಹಣ ಪಡೆದುಕೊಳ್ಳುತ್ತಿದ್ದರು. ನಂತರ ಆ ಕಾರ್ಡ್‌ಗಳಿಗೆ ಸರ್ಕಾರಕ್ಕೆ ಪಾವತಿಸಬೇಕಿರುವ ಹಣವೆಂದು ಪ್ರತಿ ತಿಂಗಳು 500/- ರೂ. ಪಡೆದುಕೊಂಡು 280/- ರೂ. ಹಣ ಪಾವತಿಸಿ ಉಳಿದ 220/- ರೂ. ಜೇಬಿಗಿಳಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಅನೇಕ ಸಂದರ್ಭಗಳಲ್ಲಿ ಸರ್ಕಾರದ ಉಚಿತ ಸವಲತ್ತುಗಳು, ಚಿಕಿತ್ಸೆ ಅನರ್ಹರಿಗೆ ಸಿಗುವಂತೆ ಮಾಡುತ್ತಿದ್ದರು.