ಬೆಂಗಳೂರು: ಮನೆಯವರು ತೀರ್ಥಯಾತ್ರೆಗೆ ತೆರಳಿದ್ದಾಗ ಮನೆಯಲ್ಲಿದ್ದ ಚಿನ್ನಾಭರಣ, ಕಾರು ಕದ್ದೊಯ್ದಿದ್ದ ಇಬ್ಬರು ಕಳ್ಳರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೀಪಕ್ ಹಾಗೂ ಪವನ್ ಬಂಧಿತ ಆರೋಪಿಗಳು. ಬಂಧಿತರಿಂದ 308 ಗ್ರಾಂ ಚಿನ್ನಾಭರಣ, 3 ಕೆ.ಜಿ ಬೆಳ್ಳಿ ವಸ್ತುಗಳು, 2 ಕಾರು ಹಾಗೂ 6 ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 41.36 ಲಕ್ಷ ರೂ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.
ವಿದ್ಯಾರಣ್ಯಪುರದ ಹೆಚ್ಎಂಟಿ ಲೇಔಟ್‌ನಲ್ಲಿ ಮನೆಯೊಂದರ ಸದಸ್ಯರು ಅಕ್ಟೋಬರ್ 15ರಂದು ತೀರ್ಥಯಾತ್ರೆಗೆ ತೆರಳಿದ್ದರು. ಆ ಸಂದರ್ಭದಲ್ಲಿ ಮನೆಯ ಮುಂಬಾಗಿಲಿಗೆ ಅಳವಡಿಸಿರುವ ಡೋರ್ ಲಾಕ್ ಮುರಿದಿದ್ದ ಆರೋಪಿಗಳು, ಮನೆಯ ಬೀರುವಿನಲ್ಲಿಟ್ಟಿದ್ದ 10 ಗ್ರಾಂ ಚಿನ್ನಾಭರಣ, 7 ಕೆ.ಜಿ ಬೆಳ್ಳಿಯ ವಸ್ತುಗಳು ಹಾಗೂ ಒಂದು ಕಾರು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಒಂದು ವಾರದ ಬಳಿಕ ಮಾಲಿಕರ ಮಗ ಮನೆ ಬಳಿ ಬಂದಾಗ ಕಳ್ಳತನವಾಗಿರುವುದು ಗಮನಕ್ಕೆ ಬಂದಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಕನಕಪುರ ರಸ್ತೆಯ ಹಾರೋಹಳ್ಳಿ ಬಳಿಯಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿತರು ಬೆಂಗಳೂರಿನ ವಿವಿಧ ಕಡೆಗಳಲ್ಲಿ ದ್ವಿಚಕ್ರ ವಾಹನಗಳು, ಕಾರುಗಳನ್ನ ಕದ್ದು ಅವುಗಳನ್ನ ಮನೆಗಳ್ಳತನಕ್ಕೆ ಬಳಸಿಕೊಳ್ಳುತ್ತಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿಗಳ ಬಂಧನದಿಂದ ಒಟ್ಟು 13 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗ: ಪೊಲೀಸ್ ಗಸ್ತಿನ ವೇಳೆ 6 ಬಾಂಗ್ಲಾ ನುಸುಳುಕೋರರು ವಶಕ್ಕೆ