ಕರ್ನಾಟಕ

karnataka

ETV Bharat / state

ಮದುವೆಗೆ ಹುಡುಗಿ ತೋರಿಸುವುದಾಗಿ ಕರೆಸಿ, ಯುವಕನಿಂದ ₹51 ಸಾವಿರ ಸುಲಿದ ನಕಲಿ ಪೊಲೀಸರು - EXTORTION CASE

ಮದುವೆಗೆ ಹುಡುಗಿ ತೋರಿಸುವುದಾಗಿ ಯುವಕನೋರ್ವನನ್ನು ಕರೆಸಿಕೊಂಡ ನಕಲಿ ಪೊಲೀಸ್ ಗ್ಯಾಂಗ್, 51 ಸಾವಿರ ರೂ. ಸುಲಿದಿದೆ. ಮೋಸ ಹೋದಾತ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

EXTORTION CASE
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Jan 31, 2025, 1:22 PM IST

ಬೆಂಗಳೂರು:ಆಕಸ್ಮಿಕವಾಗಿ ಪರಿಚಯವಾದ ಮಹಿಳೆಯ ಮಾತು ನಂಬಿದ ವ್ಯಕ್ತಿಯೊಬ್ಬನನ್ನು ನಕಲಿ ಪೊಲೀಸ್ ಗ್ಯಾಂಗ್ ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 34 ವರ್ಷದ ವ್ಯಕ್ತಿಯೊಬ್ಬರನ್ನು ಅಕ್ರಮವಾಗಿ ವಶದಲ್ಲಿರಿಸಿಕೊಂಡು 51 ಸಾವಿರ ರೂ. ಸುಲಿಗೆ ಮಾಡಿದ ಆರೋಪಿಗಳ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕ ನೀಡಿದ ದೂರಿನ ವಿವರ:"ನಾನು ಆ್ಯಪ್ ಆಧಾರಿತ ಬೈಕ್​ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದಾಗ 2023ರಲ್ಲಿ ಲಕ್ಷ್ಮೀ ಎಂಬ ಮಹಿಳೆಯ ಪರಿಚಯವಾಗಿತ್ತು. ನಂತರ ನಾವಿಬ್ಬರೂ ಪರಸ್ಪರ ಸ್ನೇಹಿತರಾದೆವು. ನನ್ನ ಮದುವೆಗೆ ಒಳ್ಳೆಯ ಹುಡುಗಿ ಹುಡುಕುತ್ತಿರುವುದಾಗಿ ಆಕೆಯ ಮುಂದೆ ಹೇಳಿಕೊಂಡಿದ್ದೆ. ಜನವರಿ 21ರಂದು ಕರೆ ಮಾಡಿದ್ದ ಲಕ್ಷ್ಮೀ, ''ಮದುವೆಗೆ ಹುಡುಗಿ ನೋಡಿದ್ದೇನೆ, ಹೆಬ್ಬಾಳದ ಮೈತ್ರಿ ಸರ್ಕಲ್ ಬಳಿ ಹೋಗಿ ಭೇಟಿಯಾಗಿ" ಎಂದಿದ್ದಳು. ಅದರಂತೆ ನಾನು ಮೈತ್ರಿ ಸರ್ಕಲ್ ಬಳಿ ಹೋದಾಗ ಲಕ್ಷ್ಮೀ ಹೇಳಿದಂತೆ ಯುವತಿಯೊಬ್ಬಳು ಬಂದು ''ಮಾತುಕತೆ ಮಾಡೋಣವೆಂದು'' ಹತ್ತಿರದಲ್ಲೇ ಇದ್ದ ಮನೆಯೊಂದಕ್ಕೆ ಕರೆದೊಯ್ದಿದ್ದಳು".

"ಮನೆಗೆ ಹೋದಾಗ ಇಬ್ಬರು ಮಹಿಳೆಯರು ಇದ್ದರು. ಈ ವೇಳೆ ಯುವತಿಯು ಮನೆಗೆ ಯಾವುದೋ ವಸ್ತುಗಳನ್ನು ತರಬೇಕಿದೆ ಅಂತ ಹೇಳಿ ನನ್ನಿಂದ 1200 ರೂ. ಹಣವನ್ನು ಆನ್​ಲೈನ್​ ಮೂಲಕ ವರ್ಗಾವಣೆ ಮಾಡಿಸಿಕೊಂಡಳು. ಬಳಿಕ ''ನಿಮ್ಮೊಂದಿಗೆ ಖಾಸಗಿಯಾಗಿ ಮಾತನಾಡಬೇಕು'' ಅಂತ ಹೇಳಿ ಪಕ್ಕದ ರೂಮಿನಲ್ಲಿ ಕುಳಿತುಕೊಳ್ಳುವಂತೆ ತಿಳಿಸಿದಳು. ನಾನು ರೂಮಿನ ಒಳಗೆ ಹೋಗಿ ಕುಳಿತುಕೊಳ್ಳುತ್ತಿದ್ದಂತೆ ನನ್ನೊಂದಿಗೆ ಬಂದ ಯುವತಿ ರೂಮ್ ಬಾಗಿಲು ಹಾಕಿದಳು. ರೂಮ್ ಬಾಗಿಲು ಹಾಕಿ ಪರಸ್ಪರ ಮಾತನಾಡುತ್ತಿದ್ದ ವೇಳೆ ಯಾರೋ ಬಾಗಿಲು ತಟ್ಟಿದರು. ಬಾಗಿಲು ತೆರೆದ ಕೂಡಲೇ ಇಬ್ಬರು ಗಂಡಸು ಮತ್ತು ಓರ್ವ ಹೆಂಗಸು ಏಕಾಏಕಿ ಬಂದು ''ನಾವು ಪೊಲೀಸರು, ಇಲ್ಲಿ ಏನು ಮಾಡುತ್ತಿದ್ದೀರಾ? ವೇಶ್ಯಾವಾಟಿಕೆ ನಡೆಸುತ್ತಿದ್ದೀರಾ?'' ಅಂತ ಬೆದರಿಸಿದ್ದಲ್ಲದೇ ನನ್ನ ಕೆನ್ನೆಗೆ ಹೊಡೆದು ಬೇರೊಂದು ರೂಮ್​ಗೆ ಕರೆದುಕೊಂಡು ಹೋಗಿ ಕೂಡಿಹಾಕಿದರು.

ಪೊಲೀಸರು​ ಅಂತ ಹೇಳಿದ ಇಬ್ಬರು ವ್ಯಕ್ತಿಗಳು ಅಲ್ಲಿಗೂ ಬಂದು ''ನಿನ್ನನ್ನು ಜೈಲಿಗೆ ಕಳಿಸಬೇಕಾಗುತ್ತದೆ'' ಅಂತ ಹೇಳಿ ನನ್ನನ್ನು ಬೆದರಿಸಲು ಆರಂಭಿಸಿದರು. ಭಯದಲ್ಲಿ ನನ್ನನ್ನು ಬಿಟ್ಟುಬಿಡುವಂತೆ ಅವರಲ್ಲಿ ಕೇಳಿಕೊಂಡೆ. ''ಸುಮ್ಮನೆ ಬಿಡೋಕೆ ಆಗಲ್ಲ, ಎಲ್ಲಾ ಕಡೆ ಖರ್ಚು ಮಾಡಬೇಕೆಂದು'' ಹೇಳಿ 2 ಲಕ್ಷ ರೂ. ಹಣ ಕೊಡುವಂತೆ ಬೇಡಿಕೆ ಇಟ್ಟರು. ಈ ವೇಳೆ ''ತಾನು ಹಾರ್ಟ್ ಪೇಶೆಂಟ್, ತನ್ನ ಬಳಿ ಅಷ್ಟೊಂದು ಹಣವಿಲ್ಲ, ಬಿಟ್ಟುಬಿಡಿ'' ಎಂದಾಗ 50 ಸಾವಿರ ರೂ. ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡರು. ಬಳಿಕ ಘಟನೆಯ ಕುರಿತು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿ ಬಿಟ್ಟು ಕಳಿಸಿದರು" ಎಂದು ದೂರಿನಲ್ಲಿ ವಿವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಕಲಿ ಪೊಲೀಸ್ ಗ್ಯಾಂಗ್ ವಶದಿಂದ ಬಿಡುಗಡೆಯಾದ ಯುವಕ, ಸ್ನೇಹಿತರ ಸಮ್ಮುಖದಲ್ಲಿ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗೆ ಶೋಧ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ವಾಟ್ಸ್‌ಆ್ಯಪ್‌ನಲ್ಲಿ 'ನಿಮ್ಮ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಪ್ರಯೋಗವಾಗಿದೆ' ಎಂದು ಮೆಸೇಜ್‌ ಕಳುಹಿಸಿ ಸುಲಿಗೆ - FRAUD CASE

ABOUT THE AUTHOR

...view details