ಕರ್ನಾಟಕ

karnataka

ETV Bharat / state

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ: 9 ಮಂದಿಗೆ ಗಾಯ, ತನಿಖಾ ತಂಡಗಳಿಂದ ಪರಿಶೀಲನೆ

ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ

By ETV Bharat Karnataka Team

Published : Mar 1, 2024, 2:30 PM IST

Updated : Mar 1, 2024, 9:32 PM IST

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ

ಬೆಂಗಳೂರು:ಇಲ್ಲಿನ ಕುಂದಲಹಳ್ಳಿ ಸಮೀಪದಲ್ಲಿರುವ ರಾಮೇಶ್ವರ ಕೆಫೆಯಲ್ಲಿ ಇಂದು ಮಧ್ಯಾಹ್ನ ನಿಗೂಢ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ದಯಾನಂದ ದೌಡಾಯಿಸಿದ್ದಾರೆ. ಬಾಂಬ್ ನಿಷ್ಕ್ರೀಯ ದಳ, ಎಫ್​ಎಸ್​ಎಲ್ ತಂಡ ಆಗಮಿಸಿ ಪರಿಶೀಲನೆ ಮಾಡುತ್ತಿದ್ದಾರೆ.

ಸ್ಫೋಟ ರಭಸಕ್ಕೆ ಹೊಟೇಲ್​​ನಲ್ಲಿದ್ದ ಒಂಬತ್ತು ಜನಕ್ಕೆ ಗಾಯವಾಗಿದೆ. ದುರಂತ ಸಂಭವಿಸುತ್ತಿದ್ದಂತೆ ಹೊಟೇಲ್​ನಲ್ಲಿದ್ದ ಸುಮಾರು 30 ಜನರು ಹೊರಗೆ ಓಡಿ ಬಂದಿದ್ದಾರೆ. ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಎಸಿಪಿ ರೀನಾ ಸುವರ್ಣ ಹಾಗೂ ಮಾರತ್ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಸ್ಫೋಟದಿಂದ ಹೋಟೆಲ್​ನಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಘಟನಾ ಸ್ಥಳದಲ್ಲಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಕಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಹೋಟೆಲ್ ಸಿಬ್ಬಂದಿ ಫಾರೂಕ್ (19), ಖಾಸಗಿ ಕಂಪನಿಯ ಉದ್ಯೋಗಿ ದೀಪಾಂಶು (23), ಸ್ವರ್ಣಾಂಬ (49), ಮೋಹನ್ (41), ನಾಗಶ್ರೀ (35), ಮೋಮಿಗೆ (30), ಬಲರಾಮ ಕೃಷ್ಣನ್ (31), ನವ್ಯಾ (25) ಮತ್ತು 67 ವರ್ಷದ ಶ್ರೀನಿವಾಸ್ ಗಾಯಗೊಂಡವರು. ಸ್ವರ್ಣಾಂಬ ಎಂಬ ಮಹಿಳೆ 40% ಸುಟ್ಟ ಗಾಯದಿಂದ ಬಳಲುತ್ತಿದ್ದಾರೆ. ಎಲ್ಲರನ್ನು ಬೇರೆ ಬೇರೆ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳು ಚೇತರಿಸಿಕೊಳ್ಳುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿ ಹೇಳಿದ್ದೇನು? 'ಸ್ಥಳೀಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿ ದಿನಕ್ಕೆ ಊಟಕ್ಕೆ ಬರುತ್ತಿದ್ದೆವು. ಅದೇ ರೀತಿ ಇಂದು ಸ್ನೇಹಿತನೊಂದಿಗೆ ಊಟಕ್ಕೆ ಬಂದಿದ್ದೆ. ಮಸಾಲದೋಸೆ ಆರ್ಡರ್ ಮಾಡಿ ಕುಳಿತಿದ್ದೆವು. ಸುಮಾರು 1.05 ಗಂಟೆಗೆ ದೊಡ್ಡದಾದ ಶಬ್ದ ಕೇಳಿಸಿತು. ಶಬ್ದ ಬರುತ್ತಿದ್ದಂತೆ ಆತಂಕದಿಂದ ಎಲ್ಲರೂ ಓಡಿಬಂದೆವು. ಹೊಟೇಲ್​​ನಲ್ಲಿ ಸುಮಾರು 30 ಮಂದಿ ಊಟ ಮಾಡುತಿದ್ದರು. ಸ್ಫೋಟದಿಂದ ಹೊಟೇಲ್ ಪೂರ್ತಿ ದಟ್ಟ ಹೊಗೆ ಆವರಿಸಿತ್ತು. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು. ಸ್ಥಳೀಯರ ಸಹಾಯದಿಂದ ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದೇವೆ' ಎಂದು ಪ್ರತ್ಯಕ್ಷದರ್ಶಿ ಎಡಿಸನ್ ಅವರು 'ಈಟಿವಿ ಭಾರತ'ಕ್ಕೆ ಸ್ಫೋಟದ ಕುರಿತು ವಿವರಿಸಿದ್ದಾರೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ

ಮಧ್ಯಾಹ್ನ 1 ಗಂಟೆ ಸುಮಾರು ದೊಡ್ಡ ಮಟ್ಟದಲ್ಲಿ ಸೌಂಡ್​ ಕೇಳಿಸಿತು. ಸಿಲಿಂಡರ್​ ಸ್ಫೋಟ ಅಂತ ತಿಳಿದು ಓಡಿ ಬಂದೆವು. ಆದರೆ, ಅದು ಸಿಲಿಂಡರ್​ ಸ್ಫೋಟ ಅಲ್ಲವೆಂದು ಮೇಲ್ನೋಟಕ್ಕೆ ಗೊತ್ತಾಯಿತು. ಕಾರಣ ಅಡುಗೆ ಮನೆಯಿಂದ ಸಿಲಿಂಡರ್​ ದೂರದಲ್ಲಿತ್ತು. ಹಾಗೆಯೇ ಬಾಂಬ್​ ಸ್ಫೋಟ ಅಂತಲೂ ಗೊತ್ತಾಗುತ್ತಿಲ್ಲ. ಆದರೆ, ಘಟನೆಯಲ್ಲಿ 5-6 ಜನ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯರು ಹಾಗೂ ಪೊಲೀಸ್​ ಸಿಬ್ಬಂದಿಯ ಸಹಾಯದೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದೆವು. ಸ್ಫೋಟದ ಪರಿಣಾಮ ಅಲ್ಲಿ-ಇಲ್ಲಿ ಸಣ್ಣ-ಪುಟ್ಟ ನಟ್ಟು ಮತ್ತು ಬೋಲ್ಟ್, ಚಿಂದಿಯಾಗಿದ್ದ ಬ್ಯಾಗ್ ಪೀಸ್​ಗಳು​​ ಬಿದ್ದಿರುವುದು ಕಾಣಿಸಿತು. ಅಡುಗೆ ಮನೆಯಲ್ಲಿ ಈ ಸ್ಫೋಟ ಸಂಭವಿಸಿಲ್ಲ, ಊಟ ಮಾಡುವ ಜಾಗದಲ್ಲಿ ಸಂಭವಿಸಿದೆ. ಸಿಲಿಂಡರ್​ ಸ್ಫೋಟ ಅಂತೂ ಅಲ್ಲ, ಹಾಗೇ ಬಾಂಬ್​ ಸ್ಫೋಟ ಎಂಬುದರ ಬಗ್ಗೆಯೂ ಗೊತ್ತಿಲ್ಲ. - ಶಬರೀಶ್​ ಕುಂದ್ಲಳ್ಳಿ - ಸ್ಥಳೀಯ

ರಾಮೇಶ್ವರಂ ಕೆಫೆಯಲ್ಲಿ ಸುಮಾರು ಒಂದು ಗಂಟೆಗೆ ಬಾಂಬ್​ ಬ್ಲಾಸ್ಟ್ ಆಗಿದೆ ಎಂಬ ಮಾಹಿತಿ ಬಂದಿತು. ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದೆವು. ಎಫ್.ಎಸ್.ಎಲ್ ತಂಡ ಕೂಡ ಬಂದಿದೆ. ಅಧಿಕಾರಿಗಳು ತನಿಖೆಯಲ್ಲಿದ್ದಾರೆ. ಘಟನೆಯಲ್ಲಿ ಸುಮಾರು ಒಂಬತ್ತು ಜನ ಗಾಯಗೊಂಡಿರುವ ಮಾಹಿತಿ ಇದೆ. ಸಿಎಂ ಮತ್ತು ಗೃಹ ಸಚಿವರು ಮಾಹಿತಿ ಪಡೆದಿದ್ದಾರೆ. ತನಿಖೆ ಬಳಿಕ ಮಾಹಿತಿ ಲಭ್ಯವಾಗಲಿದೆ ಎಂದು ಡಿಜಿ&ಐಜಿಪಿ ಅಲೋಕ್ ಮೋಹನ್ ಹೇಳಿದ್ದಾರೆ. ಸ್ಥಳದಲ್ಲಿ ಬ್ಯಾಟರಿ​ ಮತ್ತು ಸಣ್ಣ-ಪುಟ್ಟ ನಟ್ಟು ಬೋಲ್ಟ್​ ಪತ್ತೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಎಫ್.ಎಸ್.ಎಲ್ ತಂಡ ತನಿಖೆ ನಡೆಸುತ್ತಿದೆ. ಈಗಲೇ ಏನನ್ನು ಹೇಳಲಾಗದು, ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ. ಎಲ್ಲವೂ ತನಿಖೆ ಬಳಿಕ ಗೊತ್ತಾಗಲಿದೆ ಎಂದಿದ್ದಾರೆ.

ಗಾಯಾಳುಗಳ ಭೇಟಿ

ಮಹದೇವಪುರ ಕ್ಷೇತ್ರದ ಶಾಸಕಿ ಮಂಜುಳಾ ಲಿಂಬಾವಳಿ ಕೂಡ ಗಾಯಾಳುಗಳನ್ನು ಭೇಟಿ ಮಾಡಿದ್ದಾರೆ. ಅದಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದು ಸಿಲಿಂಡರ್​ ಸ್ಫೋಟವಲ್ಲ. ಹೋಟೆಲ್​ನ ಕೈ ತೊಳೆಯುವ ಜಾಗದಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಗ್ರಾನೈಟ್​ ಸಹ ಸಿಡಿದಿದೆ. ಏನೆಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ:ಕಲಬುರಗಿಯಲ್ಲಿ ಮತ್ತೋರ್ವ ಬಿಜೆಪಿ ಮುಖಂಡನ ಬರ್ಬರ ಕೊಲೆ

Last Updated : Mar 1, 2024, 9:32 PM IST

ABOUT THE AUTHOR

...view details