ಬೆಂಗಳೂರು: ಕೇಂದ್ರ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆ.1) ಕೇಂದ್ರದ ಬಜೆಟ್ ಮಂಡಿಸಲಿದ್ದಾರೆ. ಈ ಹಿಂದೆ ಪ್ರತ್ಯೇಕವಾಗಿದ್ದ ರೈಲ್ವೆ ಬಜೆಟ್ ಸಹ ಕೇಂದ್ರ ಬಜೆಟ್‌ನಲ್ಲೇ ಸೇರ್ಪಡೆಯಾಗಿದೆ. ವರ್ಷದಿಂದ ವರ್ಷಕ್ಕೆ ರೈಲ್ವೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ರೈಲ್ವೆ ಇಲಾಖೆಯ ನಿರೀಕ್ಷೆಗಳೂ ಹೆಚ್ಚಾಗಿವೆ.
ಭಾರತದಲ್ಲಿ ರೈಲ್ವೆ ಸಂಪರ್ಕ ಜಾಲ, ಮೂಲಸೌಕರ್ಯಗಳ ಅಭಿವೃದ್ದಿ, ಹೊಸ ಮಾದರಿಯ ರೈಲುಗಳ ಸೇವೆ, ರೈಲ್ವೆ ಸೇವೆಗೆ ತಂತ್ರಜ್ಞಾನ ಹೆಚ್ಚಾಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೂ ಕೂಡ ಹಿಂದಿನಿಂದಲೂ ರೈಲ್ವೆ ವಲಯಕ್ಕೆ ನಿರೀಕ್ಷೆಯಷ್ಟು ಬಜೆಟ್‌ನಲ್ಲಿ ಬೆಂಬಲ ಸಿಗದೇ ಇದ್ದರೂ ಪ್ರಮುಖ ಯೋಜನೆಗಳ ಅನುಷ್ಠಾನ, ರಾಜಧಾನಿ ಬೆಂಗಳೂರು ಸಹಿತ ಪ್ರಮುಖ ನಗರಗಳಲ್ಲಿ ರೈಲ್ವೆ ಸೇವೆ ಉನ್ನತೀಕರಣ, ನಿಲ್ದಾಣಗಳ ಅಭಿವೃದ್ದಿ, ಪ್ರಮುಖ ಮಾರ್ಗಗಳ ಜಾರಿಗೆ ಒತ್ತು ಸಿಕ್ಕಿದೆ. ಈ ಸಲವೂ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
ಹೆಚ್ಚಿದ ನಿರೀಕ್ಷೆ... ಕಾರಣ ಇಷ್ಟೇ:ಕರ್ನಾಟಕದಿಂದ ಸಂಸದರಾಗಿರುವ ವಿ.ಸೋಮಣ್ಣ ಅವರು, ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾರೆ. ಕರ್ನಾಟಕ ಸಹಿತ ದಕ್ಷಿಣ ಭಾರತದ ರೈಲ್ವೆ ಇಲಾಖೆಯ ಮೇಲುಸ್ತುವಾರಿ ಅವರಾಗಿದ್ದು, ಕಳೆದ ಬಾರಿ ರೈಲ್ವೆ ಸಚಿವರಾಗಿ ಕೆಲವೇ ದಿನಗಳಲ್ಲಿ ಬಜೆಟ್ ಮಂಡನೆಯಾಗಿತ್ತು. ಹಾಗಾಗಿ, ಅವರಿಗೆ ಇಲಾಖೆ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಕರ್ನಾಟಕ ರೈಲ್ವೆ ಸ್ಥಿತಿಗತಿಯನ್ನು ಅರಿಯುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಉಳಿದುಕೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಜೊತೆಗೆ ಸಮಗ್ರ ರೈಲ್ವೆ ಅಭಿವೃದ್ದಿಗೆ ಗಮನ ನೀಡುತ್ತಿದ್ದಾರೆ. ಮುಖ್ಯವಾಗಿ ತುಮಕೂರಿನ ಸಂಸದರೂ ಆಗಿರುವ ಸೋಮಣ್ಣ ಅವರು ಆ ಭಾಗದ ರೈಲ್ವೆ ಯೋಜನೆಗಳ ಜಾರಿಗೆ ಗಮನ ಹರಿಸಿದ್ದು, ತುಮಕೂರನ್ನು ಜಂಕ್ಷನ್ ಆಗಿ ರೂಪಿಸಿ ಈಗಿರುವ ಮಾರ್ಗದ ಜೊತೆಗೆ ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ರಾಯದುರ್ಗ ಮಾರ್ಗ ಜಾರಿಗೆ ಪ್ರಯತ್ನಿಸುತ್ತಿದ್ದಾರೆ.
ಹೆಚ್ಚಿನ ನೆರವು ಸಿಗುವ ನಿರೀಕ್ಷೆ:ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಮಾರ್ಗದ ಬೇಡಿಕೆ ಹಿಂದಿನಿಂದಲೂ ಇದೆ. ಈಗಾಗಲೇ ರೈಲ್ವೆ ಮಾರ್ಗದ ಕಾಮಗಾರಿಯೂ ಶುರುವಾಗಿದೆ. 2027ರ ಒಳಗೆ ಮುಗಿಸಬೇಕು ಎನ್ನುವುದು ಸಚಿವ ಸೋಮಣ್ಣ ಅವರ ಗುರಿ. ಈ ಬಾರಿ ಬಜೆಟ್‌ನಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಅನುದಾನದಲ್ಲಿ ಈ ಯೋಜನೆಗೆ ಹೆಚ್ಚಿನ ನೆರವು ಸಿಗುವ ನಿರೀಕ್ಷೆಯನ್ನು ಹೊಂದಲಾಗಿದೆ.
ಧಾರವಾಡ ಹಾಗೂ ಬೆಳಗಾವಿ ನೇರ ಮಾರ್ಗದ ಯೋಜನೆಯೂ ಶುರುವಾಗಿ ಕಿತ್ತೂರಿನವರೆಗೆ ಎರಡು ವರ್ಷದಲ್ಲಿ ಮುಗಿಸುವ ಉದ್ದೇಶ ಹೊಂದಲಾಗಿದೆ. ಭೂ ಸ್ವಾಧೀನದ ವಿಳಂಬದಿಂದ ಯೋಜನೆಯೂ ತಡವಾಗಿದೆ. ಈ ಮಾರ್ಗದ ಯೋಜನೆಗೂ ಇನ್ನಷ್ಟು ಅನುದಾನ ಸಿಗುವ ಸಾಧ್ಯತೆಗಳಿವೆ.
ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಯಾದ ವಿಜಯಪುರದ ಆಲಮಟ್ಟಿಯಿಂದ ಯಾದಗಿರಿ ಭಾಗಕ್ಕೆ ಸಂಪರ್ಕ ಕಲ್ಪಿಸಿ ಅಲ್ಲಿಂದ ಹೈದರಾಬಾದ್ ಮಾರ್ಗ ಸಮೀಪಗೊಳಿಸುವ ಯೋಜನೆಯೂ ಬಾಕಿ ಉಳಿದಿದೆ. ವಿಜಯಪುರ ಶೇಡಬಾಳ, ಬಾಗಲಕೋಟೆ ಜಿಲ್ಲೆಯ ಲೋಕಾಪುರದಿಂದ ಬೆಳಗಾವಿ ಜಿಲ್ಲೆಯ ಕುಡಚಿವರೆಗೂ ನಡೆಯುತ್ತಿರುವ ರೈಲ್ವೆ ಮಾರ್ಗದ ತ್ವರಿತಗೊಳಿಸಲು ಆರ್ಥಿಕ ನೆರವಿನ ನಿರೀಕ್ಷೆಗಳಿವೆ.
ಚಿಕ್ಕಮಗಳೂರಿನಿಂದ ಬೇಲೂರು ಮಾರ್ಗವಾಗಿ ಸಕಲೇಶಪುರ ಮಾರ್ಗಕ್ಕೆ ಸಂಪರ್ಕ ಕಲ್ಪಿಸಿ, ಅಲ್ಲಿಂದ ಮಂಗಳೂರು ಭಾಗಕ್ಕೆ ಕೊಂಡಿಯಾಗುವ ರೈಲ್ವೆಮಾರ್ಗದ ಕುರಿತಾದ ಯೋಜನೆ ಇನ್ನೂ ಜಾರಿಯಾಗಿಲ್ಲ. ಈ ಯೋಜನೆಯನ್ನೂ ಬಜೆಟ್‌ನಲ್ಲಿ ನಿರೀಕ್ಷಿಸಲಾಗುತ್ತಿದೆ.
ರಾಜ್ಯದಲ್ಲಿ ಹಲವೆಡೆ ರೈಲ್ವೆ ಮಾರ್ಗಗಳಲ್ಲಿ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳ ಅಗತ್ಯವಿದೆ. ರಾಜ್ಯದಲ್ಲಿ ತುರ್ತು ಆಗಲೇಬೇಕಾಗಿರುವ ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ನಿರ್ಮಾಣಕ್ಕೆ ಆರ್ಥಿಕ ಬೆಂಬಲ ನೀಡಿ ಇದನ್ನು ಬಲಗೊಳಿಸುವ ಉದ್ದೇಶ ಹೊಂದಲಾಗಿದೆ. ಒಂದು ಸೇತುವೆ ನಿರ್ಮಾಣಕ್ಕೆ ಕನಿಷ್ಠ 40 ಕೋಟಿ ರೂ. ಬೇಕಾಗಿರುವುದರಿಂದ ಹೆಚ್ಚಿನ ಅನುದಾನ ಬಜೆಟ್‌ನಲ್ಲಿ ನಿರೀಕ್ಷಿಸಲಾಗುತ್ತಿದೆ.