ಕರ್ನಾಟಕ

karnataka

ETV Bharat / state

ರಾಜ್ಯ ಬಜೆಟ್: ಕರಾವಳಿ ಮೀನುಗಾರರ ನಿರೀಕ್ಷೆಗಳೇನು?

ಮಂಗಳೂರು ಬಂದರಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ಈ ಬಾರಿಯ ರಾಜ್ಯ ಬಜೆಟ್​ನಲ್ಲಿ ಅವುಗಳಿಗೆ ಪರಿಹಾರ ಸಿಗುವ ನಿರೀಕ್ಷೆಯಲ್ಲಿದ್ದಾರೆ ಕರಾವಳಿಯ ಮೀನುಗಾರರು.

Expectations of coastal fishermen on state budget
ರಾಜ್ಯ ಬಜೆಟ್: ಕರಾವಳಿ ಮೀನುಗಾರರ ನಿರೀಕ್ಷೆಗಳೇನು?

By ETV Bharat Karnataka Team

Published : Feb 10, 2024, 6:08 PM IST

Updated : Feb 10, 2024, 6:50 PM IST

ರಾಜ್ಯ ಬಜೆಟ್: ಕರಾವಳಿ ಮೀನುಗಾರರ ನಿರೀಕ್ಷೆಗಳೇನು?

ಮಂಗಳೂರು: ಮತ್ಸ್ಯೋದ್ಯಮ ಕರಾವಳಿ ಜಿಲ್ಲೆಗಳ ಪ್ರಮುಖ ವಾಣಿಜ್ಯ ವಹಿವಾಟು. ಮಂಗಳೂರಿನಲ್ಲಿ ಪ್ರತೀ ವರ್ಷ ಮೀನುಗಾರಿಕೆಯಿಂದಲೇ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತದೆ. ಆದರೆ ಇಷ್ಟೆಲ್ಲ ವ್ಯವಹಾರ ನಡೆಯುವ‌ ಮತ್ಸ್ಯೋದ್ಯಮ ಮೂಲಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಜೆಟ್ ಮಂಡಿಸುವಾಗ ಕರಾವಳಿಯ ಮೀನುಗಾರರು ವಿಶೇಷ ನಿರೀಕ್ಷೆಗಳನ್ನಿಟ್ಟುಕೊಳ್ಳುತ್ತಾರೆ. ಫೆಬ್ರವರಿ 16 ರಂದು ರಾಜ್ಯ ಬಜೆಟ್ ಮಂಡನೆ ಆಗಲಿದೆ. ಈ ಬಜೆಟ್​ನಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಮೀನುಗಾರರು ಮೂಲಸೌಕರ್ಯದ ಅಭಿವೃದ್ಧಿಯ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಸಾವಿರಾರು ಬೋಟ್​ಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳು ಸಮುದ್ರಕ್ಕೆ ತೆರಳಿ ಮೀನುಗಾರಿಕೆ ಮುಗಿಸಿ ಮತ್ತೆ ತಂಗಲು ಬಂದರಿಗೆ ಬರುತ್ತವೆ. ಆದರೆ ಸಾವಿರಾರು‌ ಬೋಟ್​ಗಳಿರುವ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಮೂರನೇ ಹಂತದ ಬಂದರು ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಬಂದರು ಕಾಮಗಾರಿ ಪೂರ್ಣಗೊಂಡರೆ ಮೀನುಗಾರಿಕೆಗೆ ಮತ್ತಷ್ಟು ಅನುಕೂಲವಾಗಲಿದೆ. ಇದಕ್ಕೆ ಬೇಕಾದ ಅನುದಾನ ಬಿಡುಗಡೆಯ ನಿರೀಕ್ಷೆಯನ್ನು ಈ ಬಾರಿಯ ಬಜೆಟ್​ನಲ್ಲಿ ಮೀನುಗಾರರು ಹೊಂದಿದ್ದಾರೆ.

ಇನ್ನು ಮಂಗಳೂರು ಬಂದರಿನಲ್ಲಿ ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕೆಂಬುದು ಮೀನುಗಾರರ‌ ಆಗ್ರಹವಾಗಿದೆ. ಮುಖ್ಯವಾಗಿ ಮೀನುಗಾರಿಕಾ ಬಂದರು ರಸ್ತೆ ಕೆಟ್ಟ ಸ್ಥಿತಿಯಲ್ಲಿ ಇದೆ. ಸಾವಿರಾರು ಕೋಟಿ ವ್ಯವಹಾರ ನಡೆಯುವ ಮಂಗಳೂರಿನ ಬಂದರು ರಸ್ತೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯಾವುದೇ ಯೋಜನೆಗಳನ್ನು ರೂಪಿಸಲಾಗಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಬಜೆಟ್​ನಲ್ಲಿ ಅನುದಾನವನ್ನು ನಿರೀಕ್ಷಿಸಲಾಗುತ್ತಿದೆ.

ಇನ್ನೂ ಆಹಾರದ ವಸ್ತುವಾಗಿರುವ ಮೀನಿನ ಮಾರಾಟ, ಮೀನುಗಳ ಶೇಖರಣೆ ವೇಳೆ ಸ್ವಚ್ಛತೆಯ ಕೊರತೆ ಇದೆ. ಇದು ಜನರ ಆರೋಗ್ಯದ ಮೇಲೆಯೂ ಪರಿಣಾಮ ಬೀರಲಿದೆ. ಈ ನಿಟ್ಟಿನಲ್ಲಿ ಮೀನುಗಾರಿಕಾ ಬಂದರಿನಲ್ಲಿ ಸ್ವಚ್ಛತೆಯನ್ನು ರೂಪಿಸಲು ಅನುದಾನದ ಬಿಡುಗಡೆಯಾಗಬೇಕೆಂಬುದು ಮೀನುಗಾರರ ಬೇಡಿಕೆಯಾಗಿದೆ. ಮೀನುಗಾರರು ಮೀನುಗಾರಿಕೆ ತೆರಳುವಾಗ ಅಳಿವೆ ಬಾಗಿಲಿನಲ್ಲಿ ಹೂಳಿನಿಂದ ಸಮಸ್ಯೆ ಎದುರಾಗುತ್ತಿದೆ. ಇದಕ್ಕಾಗಿ ಡ್ರಜ್ಜಿಂಗ್ ಮಾಡಬೇಕು. ಇದಕ್ಕಾಗಿ ಈ ಬಾರಿಯ ಬಜೆಟ್​ನಲ್ಲಿ‌ ವಿಶೇಷ ಅನುದಾನ ಬೇಕೆನ್ನುತ್ತಾರೆ ಮೀನುಗಾರರು.

ಈ ಬಗ್ಗೆ ಮಾತನಾಡಿದ ಮೀನುಗಾರಿಕಾ ಮುಖಂಡ‌ ರಾಜರತ್ನ ಸನಿಲ್ ಈ ಬಾರಿಯ ಬಜೆಟ್​ನಲ್ಲಿ ಬಂದರಿನ ಮೂಲಸೌಕರ್ಯಕ್ಕೆ ಅನುದಾನ, ಬಂದರಿನಲ್ಲಿ ಸ್ವಚ್ಛತೆ ನಿರ್ಮಿಸಲು, ರಸ್ತೆಗಳ ಅಭಿವೃದ್ಧಿ ಮತ್ತು ಅಳಿವೆ ಬಾಗಿಲಿನಲ್ಲಿ ಡ್ರಜ್ಜಿಂಗ್ ಮಾಡಲು‌ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂಬ‌ ನಿರೀಕ್ಷೆ ಇದೆ ಎನ್ನುತ್ತಾರೆ.

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯಗೆ ಈ ಬಾರಿ ಬಜೆಟ್ ತಯಾರಿ ಮಧ್ಯೆ ಎದುರಾಗಿರುವ ಸವಾಲುಗಳೇನು?

Last Updated : Feb 10, 2024, 6:50 PM IST

ABOUT THE AUTHOR

...view details