ಶಿವಮೊಗ್ಗ:ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಅಪಾರ್ಥ ಕಲ್ಲಿಸುವ ಕೆಲಸ ಆಗಬಾರದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಈಶ್ವರಪ್ಪ ಹೇಳಿದ ಮಾತನ್ನು ಅಪಾರ್ಥ ಕಲ್ಪಿಸುವ ರೀತಿ ಕಾಂಗ್ರೆಸ್ನವರು ಮಾತನಾಡುತ್ತಿದ್ದಾರೆ. ಈಶ್ವರಪ್ಪ ರಾಷ್ಟ್ರ ದ್ರೋಹಿ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ ಕೊಲ್ಲಿ ಎಂದಿದ್ದಾರೆ. ಅವರ ಹೇಳಿಕೆ ಬಗ್ಗೆ ಟೀಕೆ, ಟಿಪ್ಪಣಿ, ಅಪಾರ್ಥ ಕಲ್ಪಿಸುವ ಕೆಲಸವಾಗುತ್ತಿದೆ ಎಂದ ಅವರು, ''ಈಶ್ವರಪ್ಪನವರ ವಿರುದ್ದ ಎಫ್ಐಆರ್ ಹಾಕಿದ್ರೆ ಏನು ತೊಂದರೆ ಇಲ್ಲ, ಅದನ್ನು ನಾವು ಎದುರಿಸುತ್ತೇವೆ'' ಎಂದು ತಿಳಿಸಿದರು.
ದೆಹಲಿಯ ಕಾಂಗ್ರೆಸ್ ಪ್ರತಿಭಟನೆಗೆ ಬಿಎಸ್ವೈ ಖಂಡನೆ:''ಸಿದ್ದರಾಮಯ್ಯ ಏನು ಬೇಕಾದರೂ ಹೇಳಿಕೆ ಕೊಡುತ್ತಾರೆ. ನಾನು ಹೇಳಿದ್ದೆ ಸರಿ ಅಂತಾ ಸಾಬೀತು ಮಾಡುವ ಪ್ರಯತ್ನ ಮಾಡುತ್ತಾರೆ. ಸಿದ್ದರಾಮಯ್ಯ ಶಾಸಕರನ್ನು ದೆಹಲಿಗೆ ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡಿದ್ದಾರೆ, ಅದನ್ನು ಖಂಡಿಸುತ್ತೇನೆ. ಸಿದ್ದರಾಮಯ್ಯ ದೆಹಲಿಗೆ ಹೋಗಿ ಪ್ರತಿಭಟನೆ ಮಾಡುವ ಮೂಲಕ ರಾಜಕೀಯ ದೊಂಬರಾಟ ಮಾಡಿದ್ದಾರೆ ಎಂದರು.
ಈಶ್ವರಪ್ಪ ವಿರುದ್ಧ ಮತ್ತೊಂದು ದೂರು:ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಮತ್ತೊಂದು ದೂರು ದಾಖಲು ಮಾಡಲಾಗಿದೆ. ಈಶ್ವರಪ್ಪ ವಿರುದ್ಧ ಆರ್.ಆರ್. ನಗರ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಶಶಾಂಕ್ ಮತ್ತು ಸಂಜಯ್ ಎಂಬುವವರು ಯಶವಂತಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೊತೆಗೆ ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.