ಕರ್ನಾಟಕ

karnataka

ETV Bharat / state

ಈಶ್ವರಪ್ಪಗೆ ಪ್ರಧಾನಿ ಮೋದಿ ಫೋಟೋ ಬಳಕೆ ಮಾಡಿಕೊಳ್ಳುವ ಅಧಿಕಾರವಿಲ್ಲ : ಆರ್.ಅಶೋಕ್ - PM Modi Photo - PM MODI PHOTO

ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪರಿಗೆ ಪ್ರಧಾನಿ ಮೋದಿ ಫೋಟೋ ಬಳಕೆ ಮಾಡಿಕೊಳ್ಳುವ ಅಧಿಕಾರವಿಲ್ಲ ಎಂದು ಆರ್.ಅಶೋಕ್ ಹೇಳಿದ್ದಾರೆ.

ESHWARAPPA HAS NO AUTHORITY  OPPOSITION LEADER ASHOK  BENGALURU
ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿ

By ETV Bharat Karnataka Team

Published : Apr 6, 2024, 4:10 PM IST

ಬೆಂಗಳೂರು :ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಬಳಕೆ ಮಾಡಿಕೊಳ್ಳುವ ಅಧಿಕಾರವಿಲ್ಲ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಮಲ್ಲೇಶ್ವರದಲ್ಲಿರುವ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರ ಫೋಟೋ ಬಳಕೆ ತಪ್ಪು, ಸರ್ಕಾರಿ ಕಾರ್ಯಕ್ರಮ ಇದ್ದರೆ ಮೋದಿ ಫೋಟೋ ಬಳಸಿಕೊಳ್ಳಬಹುದು. ಆದರೆ, ರಾಜಕೀಯವಾಗಿ ಮತ್ತು ಚುನಾವಣೆ ವೇಳೆ‌ ಬಿಜೆಪಿಗೆ ಮಾತ್ರ ಮೋದಿ ಫೋಟೋ ಬಳಕೆಗೆ ಅಧಿಕಾರ ಇದೆ ಎಂದರು.

ಈಶ್ವರಪ್ಪನವರು ಅನಧಿಕೃತವಾಗಿ ಮೋದಿಯವರ ಫೋಟೋ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಲೀಗಲ್ ಸೆಲ್ ಮೂಲಕ ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಈಶ್ವರಪ್ಪನವರು ನಾಮಪತ್ರ ಸಲ್ಲಿಸಿದ ಬಳಿಕ ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಎಸ್.ಟಿ.ಸೋಮಶೇಖರ್​ಗೆ ನೋಟಿಸ್ :ಪಕ್ಷದ ವಿರುದ್ಧ ಕೆಲಸ ಮಾಡುತ್ತಿರುವ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅವರಿಗೂ ನೋಟಿಸ್ ಕೊಡಲಾಗಿದೆ. ವಿಧಾನಸಭೆಯ ಸಭಾಧ್ಯಕ್ಷರಿಗೂ ಸಹ ದೂರು ಕೊಡಲಾಗಿದೆ ಎಂದು ಹೇಳಿದರು. ಈಗಲೂ ಬಿಜೆಪಿ ಪರವಾಗಿ ಕೆಲಸ ಮಾಡಲು ಸೋಮಶೇಖರ್ ಅವರಿಗೆ ಅವಕಾಶವಿದೆ ಎಂದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ : ಬರ ಪರಿಹಾರ ವಿಚಾರವಾಗಿ ಮಾತನಾಡಿದ ಅಶೋಕ್, ರಾಜ್ಯ ಸರ್ಕಾರವೇ ವಿಳಂಬ ಮಾಡಿದೆ. ರಾಜ್ಯ ಸರ್ಕಾರ ವಿಳಂಬ ಮಾಡಿ ನಂತರ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ. ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಬನ್ನಿ ಎನ್ನುತ್ತಾರೆ. ಯಾಕೆ ಸಂಸತ್​​​ನಲ್ಲಿ ಕಾಂಗ್ರೆಸ್ ಪಕ್ಷ ಸತ್ತು‌ ಹೋಗಿದ್ಯಾ?, ಕಾಂಗ್ರೆಸ್ಸಿಗರಿಗೆ ಸಾಮರ್ಥ್ಯ ಇಲ್ಲವೇ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆ

ಸಚಿವ ಕೃಷ್ಣ ಬೈರೇಗೌಡರು ಅಷ್ಟು ಬುದ್ಧಿವಂತರಾಗಿದ್ರೆ ಬೆಂಗಳೂರು ಉತ್ತರದಲ್ಲಿ ಸ್ಫರ್ಧಿಸಿ, ಚುನಾವಣೆಯಲ್ಲಿ ಗೆದ್ದು ಸಂಸತ್​ನಲ್ಲಿ ಪ್ರಶ್ನೆ ಕೇಳಬಹುದಿತ್ತಲ್ಲವೇ?. ಯಾವ ಮಂತ್ರಿಯೂ ಸ್ಪರ್ಧೆ ಮಾಡಲು ಸಿದ್ಧರಿಲ್ಲ. ಎಲ್ಲಾ ಮಂತ್ರಿಗಳು ಓಡು ಮಗಾ ಓಡು ಎನ್ನುತ್ತಿದ್ದಾರೆ. ಮಂತ್ರಿಗಳೆಲ್ಲಾ ಟೂರ್ ಹೋಗಿದ್ದಾರೆ, ಟೆಂಪಲ್ ರನ್ ಮಾಡುತ್ತಿದ್ದಾರೆ. ಎಲ್ಲ ಸಚಿವರೂ ಮಕ್ಕಳನ್ನು ಸ್ಪರ್ಧೆ ಮಾಡಿಸುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಬರ ಕುರಿತು ಅಮಿತ್ ಶಾ ಭಾಷಣ ಮತ್ತು ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆ ವಿಚಾರಕ್ಕೆ ಮಾತನಾಡಿದ ಅವರು, ಅಮಿತ್ ಶಾ ಅವರು ಬೆಂಗಳೂರಿಗೆ ಬಂದಿದ್ದಾಗ ಕಾಂಗ್ರೆಸ್​ನವರು ಹಲವು ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ರು. ಬರ ಬಗ್ಗೆ ಮಾತಾಡುವಾಗ ಮೂರು ತಿಂಗಳು ವಿಳಂಬವಾಗಿ ಬರ ಘೋಷಣೆಯಾಗಿದೆ ಎಂದು ಅಮಿತ್ ಶಾ ಹೇಳಿದ್ರು.‌ ಬರ ಘೋಷಣೆ ವಿಳಂಬ ಆಗಿದ್ರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡೋದಾಗಿ ಹೇಳಿದ್ದಾರೆ, ಬೇಗ ಕೊಡಿ, ಇವತ್ತೇ ಕೊಡಿ ಎಂದು ಒತ್ತಾಯಿಸಿದರು.

ಕಳೆದ ವರ್ಷ ಜುಲೈನಲ್ಲೇ ಬರ ಪರಿಸ್ಥಿತಿ ಇತ್ತು. ಆದರೆ ಸರ್ಕಾರ ಘೋಷಣೆ ಮಾಡಿದ್ದು ಸೆಪ್ಟೆಂಬರ್​ನಲ್ಲಿ. ಕಾಂಗ್ರೆಸ್ ಕಣ್ಣು ಕುರುಡಾಗಿದೆ. ಜಲಾಶಯಗಳು ಖಾಲಿಯಾಗಿದ್ರೂ ಎಚ್ಚೆತ್ತುಕೊಂಡಿರಲಿಲ್ಲ.‌ ರಾಜ್ಯದ 508 ಕೆರೆಗಳಲ್ಲಿ ಹನಿ ನೀರಿಲ್ಲ. ವಾಡಿಕೆಗಿಂತ ಮಳೆ 67% ಕೊರತೆ ಆಗಿದೆ. ಕಳೆದ‌ ಜುಲೈನಲ್ಲೇ ಬರ ಘೋಷಣೆ ಮಾಡಬಹುದಿತ್ತಲ್ಲ?. ಸರ್ಕಾರ ಸತ್ ಹೋಗಿತ್ತಾ?. ಯಾಕೆ ಬರ ಘೋಷಣೆ ಆಗಲೇ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ನಿಮಗೆ ಮಾನ ಮರ್ಯಾದೆ ಇದ್ರೆ, ನಿಮ್ಮ ಯೋಗ್ಯತೆಗೆ ಜುಲೈನಲ್ಲೇ ಬರ ಘೋಷಣೆ ಯಾಕೆ ಮಾಡಿಲ್ಲ. ಜುಲೈನಲ್ಲೇ ನೀವು ಘೋಷಣೆ ಮಾಡಿದ್ರೆ ಕೇಂದ್ರದ ಅಧ್ಯಯನ ತಂಡ ರಾಜ್ಯಕ್ಕೆ ಬರುತಿತ್ತು. ನೀವೇ ವಿಳಂಬ ಮಾಡಿ ಕೇಂದ್ರದ ಮೇಲೆ ಪರಿಹಾರ ಕೊಟ್ಟಿಲ್ಲ ಅಂದರೆ ಹೇಗೆ?. ನಿಮಗೆ ಈ ರೀತಿಯಲ್ಲಿ ಹೇಳೋಕೆ‌ ನಾಚಿಕೆ ಆಗಲ್ವಾ?. ದೆಹಲಿಯಲ್ಲಿರುವ ಕೈ ನಾಯಕರಿಗೆ ಬರ ಪರಿಹಾರ ಕೇಳುವ ಸಾಮರ್ಥ್ಯ ಇಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ಮುಂಗಾರು ಮಳೆ ಕೊರತೆಯ ಬರ ಘೋಷಣೆ ಮಾಡಿದೆ ಅಷ್ಟೇ. ಹಿಂಗಾರು ಮಳೆ ಕೊರತೆ ಬರ ಯಾಕೆ ಘೋಷಿಸಿಲ್ಲ?. ಬರ ಪರಿಹಾರ ಬಂದಿಲ್ಲ ಅಂತ ಕೇಸ್ ಹಾಕಿದ್ದಾರೆ. ಕಾಂಗ್ರೆಸ್ ಕೇಸ್ ಹಾಕಿದ್ದೇಕೆ?, ಅದನ್ನೇ ಹೇಳುತ್ತಾ ಇನ್ನಷ್ಟು ದಿನ ದೂಡಬಹುದು ಅಂತ. ರೈತರು ಪರಿಹಾರ ಕೇಳಿದ್ರೆ ಇದೆ ಅಂತ ಹೇಳಬೇಕಲ್ಲ. ಇಂಥದ್ದೇ ಪ್ರಕರಣದಲ್ಲಿ ಕೇರಳ ಸರ್ಕಾರಕ್ಕೆ ಕೋರ್ಟ್ ಛೀಮಾರಿ ಹಾಕಿದೆ ಎಂದರು. ಈ ಸರ್ಕಾರ ಸತ್ತು ಹೋಗಿದೆ, ಪಾಪರ್ ಆಗಿದೆ, ಖಾಲಿ ಆಗಿದೆ ಅಂತ ಒಪ್ಪಿಕೊಳ್ಳಲಿ. ಆಗ ನಾವು ಕೇಂದ್ರದ ಬಳಿ ಬರ ಪರಿಹಾರ ಕೇಳುತ್ತೇವೆ ಎಂದು ಹೇಳಿದರು.

ಜನಕ್ಕೆ ಈ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವ ಯಾರಂತ ಗೊತ್ತಿಲ್ಲ. ಯಾಕಂದ್ರೆ ಒಂದೂ ರಸ್ತೆ ಮಾಡಿಲ್ಲ. ನೀರಾವರಿ ಸಚಿವರು ಬಂದು ನೀರಿಗೇ ಬರ ಬಂತು. ಬ್ರ್ಯಾಂಡ್ ಬೆಂಗಳೂರು ಬ್ಯಾಡ್ ಬೆಂಗಳೂರು ಆಗಿದೆ. ಈ 10 ತಿಂಗಳಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ತೋರಿಸಲಿ, ಡ್ಯಾಂ, ಆಸ್ಪತ್ರೆ, ಶಾಲೆ ಕಟ್ಟಿದ್ದೀರಾ?, ಯಾವ ಮುಖ ಇಟ್ಕೊಂಡು ಚುನಾವಣೆಗೆ ಹೋಗ್ತಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ಕೇಂದ್ರದ ಸಾಲದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಸಾಲ‌ ಮಾಡಿದ್ದೇಕೆ?. ನೀವು ಸಾಲ ಮಾಡಿದ್ದೇಕೆಂದು ನಾನು ಕೇಳಲ್ಲ. ಕೇಂದ್ರ ಸರ್ಕಾರ ಶಿಕ್ಷಣ, ಹೊಸ ಆಸ್ಪತ್ರೆ, ರಸ್ತೆಗಳು, ಮೂಲ ಸೌಕರ್ಯ ಹೆಚ್ಚು ಮಾಡಲು ಸಾಲ‌ ಮಾಡಿದೆ. ಬಸವರಾಜ ಬೊಮ್ಮಾಯಿ‌ ಇದ್ದಾಗ‌ ಆರ್ಥಿಕ ಸ್ಥಿತಿ ಕುಲಗೆಡಿಸಿ ಹೋಗಿದ್ರು ಅಂತಾರೆ ಸಿದ್ದರಾಮಯ್ಯ. ಬೊಮ್ಮಾಯಿ‌ ಹೋಗುವಾಗ 25 ಸಾವಿರ ಕೋಟಿ‌ ಉಳಿಸಿ‌ಹೋಗಿದ್ರು. ಬೊಮ್ಮಾಯಿ‌ ಅವರು ಬಿಟ್ಟು‌ಹೋದ ಹಣದಿಂದ ಸರ್ಕಾರ ನಡೆಯುತ್ತಿದೆ. ಕಾಂಗ್ರೆಸ್​​ನವರ ಥರ ಲೂಟಿ‌ ಹೊಡೆಯಲು ಮೋದಿ ಸಾಲ‌ ಮಾಡಿಲ್ಲ ಎಂದು ತಿರುಗೇಟು ನೀಡಿದರು.

2019ರಲ್ಲಿ‌ ಸಮ್ಮಿಶ್ರ ಸರ್ಕಾರ ಇತ್ತು. ಆಗ ಗುಮಾಸ್ತನ‌ ರೀತಿ‌ ಕೆಲಸ ಮಾಡಿದ್ದೇನೆ ಅಂತಾರೆ. ಆಗ ಸಿಎಂ ಆಗಿದ್ದ‌ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಕೇಂದ್ರದ ಹಣಕಾಸು ಇಲಾಖೆ ಮೀಟಿಂಗ್ ಗೆ ಹೋಗಲು ಬಿಡಲಿಲ್ಲ. ಇದರಲ್ಲಿ‌ ಒಬ್ಬ ಜೆಡಿಎಸ್‌ ನವರು ಹೋಗಲಿಲ್ಲ. ಡಾ.ಜಿ. ಪರಮೇಶ್ವರ್,‌ ಕೆಜೆ‌ ಜಾರ್ಜ್, ಎಂಬಿ ಪಾಟಿಲ್‌ ಅಷ್ಟೇ ಹೋಗಿದ್ರು. ಹೋಗಿ‌ ಏನ್ ಮಾಡಿದ್ರಿ? ಬಿರಿಯಾನಿ ತಿಂದ್ಕೊಂಡ್ ಬಂದ್ರಾ? ಎಂದು ವ್ಯಂಗ್ಯವಾಡಿದರು.

ಸಂಸದ ಡಿ.ಕೆ. ಸುರೇಶ್ ದೇಶವಿಭಜನೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಡಿ.ಕೆ.ಸುರೇಶ್ ಅವರನ್ನು ವಿಲನ್ ಮಾಡಿಬಿಟ್ರಿ ಅಂತ ಕಾಂಗ್ರೆಸ್​ನವರು ಹೇಳಿದ್ರು. ತಾಯಿ ಭಾರತಾಂಬೆಯನ್ನು ವಿಭಜನೆ ಮಾಡಬೇಕು ಅಂದಿದ್ದು ಸರೀನಾ? ಎಂದು ಪ್ರಶ್ನಿಸಿದರು.

ಪುಲ್ವಾಮಾ ದಾಳಿ ಕುರಿತು ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರದಲ್ಲಿ ಮಾತನಾಡಿದ ಅಶೋಕ್, ಇದು ನಮ್ಮ ದೇಶದ ಸೈನಿಕರ ಬಗ್ಗೆ ಅಗೌರವದ ಹೇಳಿಕೆ. ನಮ್ಮ‌ ಸೈನಿಕರು ಪುಲ್ವಾಮಾ ಬಳಿಕ ಸರ್ಜಿಕಲ್ ದಾಳಿ ಮಾಡಿದ್ದಾರೆ. ಪುಲ್ವಾಮಾ ದಾಳಿ ಬಿಜೆಪಿಯವ್ರು ಮಾಡಿಸಿದ್ದು ಅಂತ ಹೇಳುವ ಮೂಲಕ ನಮ್ಮ ಸೈನಿಕರಿಗೆ ಅವಮಾನ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರ ಇಂತಹ ಹೇಳಿಕೆಗಳ ವಿರುದ್ಧ ಚುನಾವಣಾ ಆಯೋಗಕ್ಕೆ‌ ದೂರು ಸಲ್ಲಿಸುತ್ತೇವೆ ಎಂದು ಹೇಳಿದರು.

ಓದಿ:ಫೆಡರಲಿಸಂಗೆ ಬದ್ಧ; ಪ್ರಮುಖ ರಾಜ್ಯಗಳಲ್ಲಿ ಶಾಂತಿ, ಅಭಿವೃದ್ಧಿ ಕ್ರಮಗಳ ಭರವಸೆ ನೀಡಿದ ಕಾಂಗ್ರೆಸ್ - Congress Promise

ABOUT THE AUTHOR

...view details