ಮಂಗಳೂರು: ಗೋವಾದಿಂದ ಮಂಗಳೂರು ನಗರಕ್ಕೆ ಮಾದಕ ವಸ್ತು ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೇರಿಯಾ ದೇಶದ ಪ್ರಜೆಯನ್ನು ಬಂಧಿಸಲಾಗಿದೆ. ಪ್ರಸ್ತುತ ಗೋವಾದಲ್ಲಿ ವಾಸ್ತವ್ಯವಿದ್ದ ಆರೋಪಿಯಿಂದ 30 ಗ್ರಾಂ ಕೊಕೇನ್ ಅನ್ನು ಮಂಗಳೂರು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನೈಜಿರಿಯಾದ ಮೈಕೆಲ್ ಒಕಾಫರ್ ಓಡಿಕ್ಪೋ (44) ಬಂಧಿತ ಆರೋಪಿಯಾಗಿದ್ದಾನೆ. 2024ರ ಮಾರ್ಚ್ ತಿಂಗಳಲ್ಲಿ ಉಳ್ಳಾಲ ತಾಲೂಕು ಆಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಮೈದಾನದ ಬಳಿ ದ್ವಿಚಕ್ರ ವಾಹನದಲ್ಲಿ ಕೊಕೇನ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿತ್ತು. ಅಂಬ್ಲಮೊಗರು ನಿವಾಸಿಗಳಾದ ಸದಕತ್ ಯು. ಹಾಗೂ ಮಹಮ್ಮದ್ ಅಶ್ಫಕ್ ಎಂಬವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ, 34 ಗ್ರಾಂ ಕೊಕೇನ್ ಹಾಗೂ ಇತರ ಒಟ್ಟು ₹2,72,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು. ಈ ಬಗ್ಗೆ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗೋವಾದಿಂದ ಕೊಕೇನ್ ಖರೀದಿ: ಪ್ರಕರಣದಲ್ಲಿ ಆರೋಪಿಗಳಿಗೆ ಕೊಕೇನ್ ನೀಡಿದ ಗೋವಾದ ಡ್ರಗ್ ಪೆಡ್ಲರ್ ಮೈಕೆಲ್ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು, ಉತ್ತರ ಗೋವಾದ ಕಾಲನ್ಗೂಟ್ ಎಂಬಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಆತನ ಬಳಿಯಿದ್ದ 30 ಗ್ರಾಂ ಕೊಕೇನ್, ಸಾಗಾಟಕ್ಕೆ ಉಪಯೋಗಿಸಿದ ಕಾರು, ಎರಡು ಮೊಬೈಲ್ ಫೋನ್, ₹4500 ನಗದು ಹಣ ಹಾಗೂ ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ಪಡೆದ ಸೊತ್ತಿನ ಒಟ್ಟು ಮೌಲ್ಯ ₹11,25,000 ರೂ. ಆಗಿದೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಇಎನ್ ಕ್ರೈಂ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ನೈಜೇರಿಯಾದಿಂದ 2012ರಲ್ಲಿ ವ್ಯಾಪಾರದ ವೀಸಾದಲ್ಲಿ ಭಾರತಕ್ಕೆ ಬಂದು ಮುಂಬೈಯಲ್ಲಿ ಸುಮಾರು ಒಂದೂವರೆ ವರ್ಷ ವಾಸವಿದ್ದ. ನಂತರ ಗೋವಾದಲ್ಲಿ ಇದ್ದುಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಈತನ ವಿರುದ್ದ ಈಗಾಗಲೇ ಗೋವಾದಲ್ಲಿ ಒಟ್ಟು ಮೂರು ಮಾದಕ ವಸ್ತು ಮಾರಾಟ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಆನ್ಲೈನ್ ಹೂಡಿಕೆ ಹೆಸರಿನಲ್ಲಿ ₹88 ಲಕ್ಷ ವಂಚಿಸಿದ್ದ 10 ಮಂದಿ ಸೆರೆ