ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಳಿಯ ತೀವ್ರತೆ ಅಧಿಕವಾಗಿದ್ದು, ನಗರದಲ್ಲಿ ದಟ್ಟ ಮಂಜು ಕವಿದ ವಾತಾವರಣವಿದ್ದು, ವೀಕ್ಷಣಾ ಪ್ರಮಾಣ ಕುಸಿದಿದೆ. ಈ ನಡುವೆ ವಾಯುಗುಣಮಟ್ಟ ತೀವ್ರ ಕಳಪೆ ಹಂತದಲ್ಲಿ ಮುಂದುವರೆದಿದೆ.
ದೆಹಲಿಯಲ್ಲಿ ಬುಧವಾರ 5 ಡಿಗ್ರಿ ತಾಪಾಮಾನ ದಾಖಲಾಗಿದ್ದು, ಮಂಗಳವಾರ ಮಧ್ಯ ರಾತ್ರಿ 2.30ರ ಸುಮಾರಿಗೆ 7.4 ಡಿಗ್ರಿ ತಾಪಮಾನ ದಾಖಲಾಗಿತ್ತು ಎಂದು ಐಎಂಡಿ ತಿಳಿಸಿದೆ. ಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅನುಸಾರ, ಬುಧವಾರ ಬೆಳಗ್ಗೆ 7ಕ್ಕೆ ಎಕ್ಯೂಐ 442 ದಾಖಲಾಗಿದ್ದು, ಮಂಗಳವಾರ ಇದೇ ಹೊತ್ತಿಗೆ ಎಕ್ಯೂಐ 421 ಇತ್ತು. ಐಟಿಒದಲ್ಲಿ ವಾಯುಗುಣಮಟ್ಟ 458 ದಾಖಲಾಗುವ ಮೂಲಕ ತೀವ್ರ ಕಳಪೆ ಹಂತದಲ್ಲಿದೆ. ಇನ್ನು ಆಲಿಪುರ್ನಲ್ಲಿ 471, ಜವಾಹರ್ಲಾಲ್ ನೆಹರು ಸ್ಟೇಡಿಯಂನಲ್ಲಿ 443, ಡಿಟಿಯುನಲ್ಲಿ 432, ಐಜಿಐ ವಿಮಾನ ನಿಲ್ದಾಣದಲ್ಲಿ 418, ಆರ್ಕೆ ಪುರಂನಲ್ಲಿ 464, ಡಿಯು ಉತ್ತರ ಕ್ಯಾಂಪಸ್ನಲ್ಲಿ 436 ದಾಖಲಾಗಿದೆ.
ಈ ನಡುವೆ ಕೆಲವು ಪ್ರದೇಶದಲ್ಲಿ ತೀವ್ರ ಕಳಪೆ ಬದಲಾಗಿ ಎಕ್ಯೂಐ ಕಳಪೆ ವರ್ಗದಲ್ಲಿ ಕಂಡಿದೆ. ಚಾಂದಿನಿ ಚೌಕ್ನಲ್ಲಿ ಎಕ್ಯೂಐ 374, ಲೋದಿ ರೋಡ್ನಲ್ಲಿ 348, ದಿಲ್ಶದ್ ಗಾರ್ಡನ್ನಲ್ಲಿ 344, ಎನ್ಎಸ್ಐಟಿ ದ್ವಾರಕಾದಲ್ಲಿ 367 ದಾಖಲಾಗಿದೆ. ಈ ತೀವ್ರ ಚಳಿಯ ನಡುವೆಯೇ ವಾಯು ಸೇನಾ ಸಿಬ್ಬಂದಿ 78ನೇ ಗಣರಾಜ್ಯೋತ್ಸ ಪರೇಡ್ಗೆ ಕರ್ತವ್ಯ ಪಥ್ನಲ್ಲಿ ರಿಹರ್ಸಲ್ ನಡೆಸಿದ್ದಾರೆ.
ಬಿಗಾಡಾಯಿಸಿದ ಜನರ ಆರೋಗ್ಯ ಸಮಸ್ಯೆ: ಈ ನಡುವೆ ಮಹಾರಾಷ್ಟ್ರದಿಂದ ಇಂಡಿಯಾ ಗೇಟ್ ವೀಕ್ಷಣೆಗೆ ಬಂದಿದ್ದ ಅವಿನಾಶ್ ಎಂಬ ವ್ಯಕ್ತಿ ಮಾಲಿನ್ಯದಿಂದ ಉಸಿರಾಟದ ಸಮಸ್ಯೆ ಅನುಭವಿಸಿರುವ ವರದಿಯಾಗಿದೆ. ಈ ಕುರಿತು ಮಾತನಾಡಿರುವ ಅವರು, ನಾನು ಬೈಕ್ನಲ್ಲಿ ದೆಹಲಿಗೆ ಬಂದಿದ್ದು, ಗುರುಗ್ರಾಮ್ಗೆ ಹೋಗುವಾಗ ಉಸಿರಾಟದ ಸಮಸ್ಯೆ ಅನುಭವಿಸಿರುವುದಾಗಿ ತಿಳಿಸಿದ್ದಾರೆ.
ನಗರದ ನಿವಾಸಿ ಭಗತ್ ಸಿಂಗ್ ಮಾತನಾಡಿ, ಮಾಲಿನ್ಯದಿಂದಾಗಿ ಉಸಿರಾಟದ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಪಾರ್ಕ್ಗೆ ವಾಕಿಂಗ್ ಬರುವವರ ಸಂಖ್ಯೆ ಕುಸಿತಗೊಂಡಿದೆ ಎಂದಿದ್ದಾರೆ. ಕಳೆದೆರಡು ದಿನಗಳಿಂದ ಮಾಲಿನ್ಯ ಹೆಚ್ಚಿದ್ದು, ಉಸಿರಾಟ ಕಷ್ಟವಾಗುತ್ತಿದೆ ಎಂದಿದ್ದಾರೆ.
ಇಂಡಿಯಾ ಗೇಟ್ ಭೇಟಿಗೆ ಬಂದಿದ್ದ ಅನಂತ್ ಕುಮಾರ್, ದಿಢೀರ್ ಆಗಿ ಮಾಲಿನ್ಯ ಎಷ್ಟರ ಮಟ್ಟಿಗೆ ಹೆಚ್ಚುತ್ತಿದೆ ಎಂಬುದನ್ನು ನೋಡುತ್ತಿದ್ದೇವೆ. ಈ ಮೊದಲು ಕೊಂಚ ನಿರಾಳವಾದಂತೆ ಕಂಡಿದ್ದರೂ, ಇದೀಗ ಮತ್ತೆ ಮಾಲಿನ್ಯ ಸಮಸ್ಯೆ ಹೆಚ್ಚಿದೆ. ಈ ಸಂಬಂದ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಡಿಸೆಂಬರ್ 16ರಿಂದ ಜಿಆರ್ಎಪಿ ಹಂತ ನಾಲ್ಕನ್ನು ಜಾರಿಗೆ ತರಲಾಗಿದೆ. ದೆಹಲಿ ಎಕ್ಯೂಐ ಮಟ್ಟ 400 ಗಡಿ ದಾಟಿದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಯಿತು.
ಇದನ್ನೂ ಓದಿ: 48 ಸ್ಥಳಗಳಲ್ಲಿ ಇಂದು 3 ಗಂಟೆಗಳ ಕಾಲ ರೈಲು ತಡೆ: ರೈತ ಸಂಘಟನೆಗಳ ನಿರ್ಧಾರ