ಬೆಂಗಳೂರು:ಕಳೆದ ವರ್ಷ ಏಪ್ರಿಲ್ನಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ವತಿಯಿಂದ ರಾಜ್ಯದಲ್ಲಿ ಆಯೋಜಿಸಲಾಗಿದ್ದ ಹುಲಿ ಯೋಜನೆ 50 ಕಾರ್ಯಕ್ರಮಕ್ಕೆ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಆತಿಥ್ಯದ ಬಾಕಿ ಬಿಲ್ ಅನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, 2023ರ ಏಪ್ರಿಲ್ನಲ್ಲಿ ಈ ಕಾರ್ಯಕ್ರಮ ನಡೆದಾಗ ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿತ್ತು. ಹೀಗಾಗಿ ರಾಜ್ಯ ಸರ್ಕಾರ ಭಾಗಿ ಆಗಿರಲಿಲ್ಲ. ರಾಜ್ಯ ಲಾಂಛನದ ಬಳಕೆಯೂ ಆಗಿರಲಿಲ್ಲ. ಇದು ಸಂಪೂರ್ಣ ಎನ್ಟಿಸಿಎ ಕಾರ್ಯಕ್ರಮವಾಗಿತ್ತು ಎಂದರು.
ದೇಶದ ಪ್ರಧಾನಿಯವರು ರಾಜ್ಯಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಆತಿಥ್ಯ ನಿರ್ವಹಣೆಗಾಗಿ ಸ್ಥಳೀಯವಾಗಿ ರಚಿಸಲಾಗಿದ್ದ ಸಮಿತಿಯಲ್ಲಿ ನಮ್ಮ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು. ವಾಸ್ತವವಾಗಿ ಈ ಕಾರ್ಯಕ್ರಮಕ್ಕೆ ಆಗುವ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಎನ್ಟಿಸಿಎ ಹೇಳಿತ್ತು ಎಂದು ವಿವರಿಸಿದರು.