ರಾಯಚೂರು/ಚಿಕ್ಕಮಗಳೂರು:ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿವಾರಾಣಸಿ ನ್ಯಾಯಾಲಯವು ನೀಡಿದ ಆದೇಶವು ಎಲ್ಲ ಹಿಂದೂಗಳಿಗೆ ಸಂತೋಷದ ವಿಷಯವಾಗಿದೆ. ಕಾನೂನು ಮತ್ತು ಸಂವಿಧಾನ ನಂಬಿಕೊಂಡು ಬಂದಿರುವ ದೇಶ ಭಾರತ, ಇದರಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ರಾಯಚೂರಿನ ಪ್ರವಾಸ ಮಂದಿರದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶಿ ವಿಶ್ವನಾಥನ ದೇವಸ್ಥಾನ ಒಡೆದು ಮಸೀದಿ ಕಟ್ಟಿರುವ ಬಗ್ಗೆ ವಾದ, ವಿವಾದಗಳು ನಡೆದವು. ಇಂದು ವಾರಾಣಸಿ ಜಿಲ್ಲಾ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಪುರಾತನ ಇಲಾಖೆಯ 800 ಪುಟಗಳ ವರದಿ ಆಧರಿಸಿ ಕೋರ್ಟ್ ತೀರ್ಪು ಕೊಟ್ಟಿದೆ. ಮುಂದಿನ ಏಳು ದಿನಗಳಲ್ಲಿ ಪೂಜೆಗೆ ಅವಕಾಶ ನೀಡಲಾಗಿದೆ ಎಂದರು.
ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ಅನೇಕ ವಿಚಾರ ಹೇಳುತ್ತಾ ಬಂದಿದೆ. ಬಿಜೆಪಿಯವರು ರಾಮಮಂದಿರ ಕಟ್ಟುವುದೇ ಇಲ್ಲ, ಬರೀ ಚುನಾವಣೆ ವೇಳೆಯಲ್ಲಿ ಮಾತ್ರ ರಾಮಮಂದಿರದ ವಿಚಾರ ತೆಗೆಯುತ್ತಾರೆ. ರಾಮಮಂದಿರದ ಕೋರ್ಟ್ ತೀರ್ಪು ಬಂದ ಮೇಲೆ, ರಾಮ ಮಂದಿರ ಕಟ್ಟುತ್ತೇವೆ ಎಂದು ಹೇಳುತ್ತಾರೆ ತಾರೀಖು ಹೇಳುವುದಿಲ್ಲ ಎಂದು ಟೀಕಿಸುತ್ತಿದ್ದರು. ಈಗ ಭವ್ಯ ರಾಮಮಂದಿರ ನಿರ್ಮಾಣ ಆಗಿದೆ. ಈಗ ಬಿಜೆಪಿಯ ರಾಮನೆಂದು ಹೇಳಲು ಶುರು ಮಾಡಿದ್ದಾರೆ. ರಾಮಮಂದಿರ ವಿಚಾರದಲ್ಲಿ ಮಾಡಿದ ತಪ್ಪು, ಕಾಶಿ ವಿಶ್ವನಾಥನ ವಿಚಾರದಲ್ಲಿ ಮಾಡಬೇಡಿ. ಯಾವುದೇ ಕಾರಣಕ್ಕೂ, ಸಹ ಸಮಾಜ ಒಡೆಯಬೇಡಿ. ಎಲ್ಲರೂ ಒಟ್ಟಾಗಿ ಕಾಶಿಯಲ್ಲಿ ದೇವಸ್ಥಾನ ಕಟ್ಟೋಣ ಎಂದು ಹೇಳಿದರು.