ಬೆಂಗಳೂರು: ರಾಜ್ಯದಲ್ಲಿ ಆನೆ ಮತ್ತು ಮಾನವ ಸಂಘರ್ಷ ತಡೆಯಲು ಅರಣ್ಯ ಇಲಾಖೆ ಮತ್ತೊಂದು ಪ್ರಯತ್ನ ನಡೆಸಿದ್ದು, ಭದ್ರಾ ಅಭಯಾರಣ್ಯದಲ್ಲಿ 'ಆನೆ ಧಾಮ' ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ.
ಭದ್ರಾ ಅಭಯಾರಣ್ಯದ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಆನೆ ಧಾಮ ನಿರ್ಮಿಸಲಾಗುತ್ತದೆ. ಆನೆಗಳಿಗೆ ಇಲ್ಲಿ ಅಗತ್ಯ ಆಹಾರ, ನೀರು ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತದೆ.
ಕೊಡಗು, ಹಾಸನ, ಚಿಕ್ಕಮಗಳೂರು ಸುತ್ತಮುತ್ತ ಕಾಡಿನಿಂದ ಹೊರಬಂದು ಗುಂಪಾಗಿ ಸಂಚರಿಸುವ ಕೆಲವು ಆನೆಗಳಿಂದ ಸಮಸ್ಯೆ ತಲೆದೋರಿದೆ. ಕಾಡಿನ ಹೊರಗಡೆಯೇ ಓಡಾಡುತ್ತಾ ತೊಂದರೆ ನೀಡುವ ಸುಮಾರು 150ಕ್ಕೂ ಹೆಚ್ಚು ಪುಂಡಾನೆಗಳನ್ನು ಅರಣ್ಯ ಇಲಾಖೆ ಗುರುತಿಸಿದೆ. ಇಂತಹ ಆನೆಗಳನ್ನು ಖೆಡ್ಡಾಕ್ಕೆ ಕೆಡವಿ ನಂತರ ಅವುಗಳನ್ನು ಆನೆಗಳ ಧಾಮದಲ್ಲಿ ಬಿಡುವ ಯೋಜನೆಯನ್ನ ಅರಣ್ಯ ಇಲಾಖೆ ರೂಪಿಸಿದ್ದು, ಇದು ಕಾರ್ಯಗತಗೊಳ್ಳಲು ಕಾಲಾವಕಾಶ ಬೇಕಾಗುತ್ತದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ದೇಶದಲ್ಲಿಯೇ ಅತಿ ಹೆಚ್ಚು 6395 ಆನೆಗಳು ರಾಜ್ಯದಲ್ಲಿವೆ. ಸರ್ಕಾರವು ಪುಂಡಾನೆಗಳ ಹಾವಳಿ ತಡೆಗೆ ಮಾರ್ಗೋಪಾಯ ಕಂಡುಹಿಡಿಯಲು ನೆರೆ ರಾಜ್ಯಗಳ ಸಚಿವರೊಂದಿಗೆ ಸಭೆ ನಡೆಸಿದೆ. ಅಂತಾರಾಷ್ಟ್ರೀಯ ಸಮಾವೇಶ ನಡೆಸಿದೆ. ತಜ್ಞರ ಸಮಿತಿ ರಚಿಸಿ ಅಧ್ಯಯನ ನಡೆಸುತ್ತಿದೆ. ಆನೆ ಕಾರ್ಯಪಡೆಯನ್ನೂ ರಚಿಸಿದೆ. ಅಷ್ಟೇ ಅಲ್ಲದೆ ಸಾರ್ವಜನಿಕರಿಗೆ ಸಕಾಲದಲ್ಲಿ ಆನೆಗಳ ಓಡಾಟದ ಬಗ್ಗೆ ಮಾಹಿತಿ ನೀಡುವ ಕಾರ್ಯ ಮಾಡುತ್ತಿದೆ ಎಂದು ಹೇಳಿದ್ದಾರೆ.
ಜನಸಂಖ್ಯೆ ಹೆಚ್ಚಳವಾದಂತೆ ಜನ ವಸತಿ ಪ್ರದೇಶವು ಅರಣ್ಯದಂಚಿನವರೆಗೆ ವಿಸ್ತರಣೆ ಆಗಿದೆ. ಕಾಡಿನ ಅಂಚಿನಲ್ಲೇ ಕೃಷಿ ಚಟುವಟಿಕೆಗಳು ನಡೆಯತೊಡಗಿವೆ. ಕಾಡಿನಂಚಿನ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಹೀಗಾಗಿ ಆನೆಗಳು ಬಾಳೆ, ಹಲಸು, ಭತ್ತ ಇತ್ಯಾದಿ ಬೆಳೆಗಳನ್ನು ತಿನ್ನಲು, ನೀರು ಕುಡಿಯಲು ಊರಿಗೆ ಬರುತ್ತಿವೆ ಎಂದು ತಜ್ಞರು ಹೇಳುತ್ತಾರೆ. ಅದಾಗ್ಯೂ, ಆನೆಗಳು ನಾಡಿಗೆ ಬರಲು ಕಾರಣವೇನು? ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಮಾನವ-ಆನೆ ಸಂಘರ್ಷ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದ್ದಾರೆ.