ಬೆಂಗಳೂರು:ಶಾಲಾ ಮಕ್ಕಳು ಮತ್ತು ಕಾರ್ಪೊರೇಟ್ ಸಿಬ್ಬಂದಿ ಸಾರಿಗೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ಎನ್‌ವಿಎಸ್ ಟ್ರಾವೆಲ್ ಸೊಲ್ಯೂಷನ್ಸ್ ದೇಶದಲ್ಲಿಯೇ ಮೊದಲ ಬಾರಿಗೆ ವಿದ್ಯುಚ್ಚಾಲಿತ (ಇವಿ) ಬಸ್‌ಗಳನ್ನು ಪರಿಚಯಿಸಿದೆ. ಇವಿ ಬಸ್ ತಯಾರಕ ಕಂಪೆನಿಯಾಗಿರುವ ಐಷರ್ ಮೊದಲ ಬ್ಯಾಚ್ನ ಬಸ್‌ಗಳನ್ನು ಶನಿವಾರ ಎನ್‌ವಿಎಸ್ ಟ್ರಾವೆಲ್ ಸೊಲ್ಯೂಷನ್ಸ್‌ಗೆ ಹಸ್ತಾಂತರಿಸಿತು.
ಮೊದಲ ಬಸ್ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ವಿಎಸ್ ಟ್ರಾವೆಲ್ ಸೊಲ್ಯೂಷನ್ಸ್ ಸ್ಥಾಪಕ ಮತ್ತು ಸಿಇಒ ಎನ್.ವಿ.ನಾಗರಾಜ್, ''ಇವಿ ಬಸ್‌ಗಳಿಗೆ ಸರ್ಕಾರ ಸಹಾಯಧನ ನೀಡುವುದಿಲ್ಲ. ಹಾಗಾಗಿ, ಈ ಬಸ್‌ಗಳು ದುಬಾರಿಯಾಗಿವೆ. ಅನೇಕ ಕಂಪೆನಿಗಳು ಸುಸ್ಥಿರ ಮತ್ತು ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಒಲವು ಹೊಂದಿದ್ದು, ಇವಿ ಬಸ್‌ಗಳು ಸಾಮಾನ್ಯ ಬಸ್‌ಗಳಿಗಿಂತ ಮೂರ್ನಾಲ್ಕು ಪಟ್ಟು ದುಬಾರಿಯಾಗುವುದರಿಂದ ತಾವೇ ಖರೀದಿಸಲು ಮುಂದಾಗುತ್ತಿಲ್ಲ. ಖಾಸಗಿ ಸೇವಾ ಸಂಸ್ಥೆಗಳೂ ಇದೇ ಕಾರಣಕ್ಕೆ ಹಿಂದೇಟು ಹಾಕುತ್ತವೆ. ಆದರೆ, ವಿನೂತನ ವಹಿವಾಟು ಮಾದರಿಯೊಂದನ್ನು ಅಭಿವೃದ್ಧಿಪಡಿಸಿದ್ದು, ಆ ಮೂಲಕ ಖಾಸಗಿ ಕಂಪೆನಿಗಳು ಮತ್ತು ಉತ್ಪಾದಕ ಕಂಪೆನಿಗಳ ಕಾರ್ಬನ್ ಫುಟ್‌ಪ್ರಿಂಟ್ ಇಳಿಕೆಯ ಗುರಿ ಈಡೇರಿಕೆಗೆ ನೆರವಾಗಲು ಪ್ರಯತ್ನಿಸುತ್ತಿದ್ದೇವೆ'' ಎಂದು ತಿಳಿಸಿದರು.
''ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಎನ್‌ವಿಎಸ್ ಸಿಬ್ಬಂದಿ ಸಾರಿಗೆ ಸೊಲ್ಯೂಷನ್ ಪರಿಚಯಿಸಿದ್ದು ವಿಶ್ವಾಸಾರ್ಹತೆ, ಸಮಯದ ನಿಖರತೆ, ಸುರಕ್ಷತೆ ಮತ್ತು ಸ್ಪರ್ಧಾತ್ಮಕ ಬೆಲೆಗೆ ಒತ್ತು ನೀಡುತ್ತಿದ್ದೇವೆ. ಸೇವೆಗಾಗಿ ಹಲವು ಆಯ್ಕೆಗಳನ್ನು ನಾವು ಗ್ರಾಹಕ ಕಂಪೆನಿಗಳಿಗೆ ಒದಗಿಸುತ್ತಿದ್ದೇವೆ'' ಎಂದು ಹೇಳಿದರು.
''ಕಾರ್ಪೊರೇಟ್ ಸಿಬ್ಬಂದಿ ಸಾರಿಗೆ ಕ್ಷೇತ್ರದಲ್ಲಿ ಇವಿ ಬಸ್‌ಗಳ ಪರಿಚಯ ಸ್ವಚ್ಛ ಮತ್ತು ಪರಿಸರಸ್ನೇಹಿ ಭವಿಷ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಕಾರ್ಪೊರೇಟ್ ಸಾರಿಗೆ ಕ್ಷೇತ್ರದಲ್ಲಿ ಇದು ಹೊಸ ಬೆಂಚ್‌ಮಾರ್ಕ್ ಸೃಷ್ಟಿಸಲಿದೆ. ದೇಶದ ಕಾರ್ಪೊರೇಟ್ ಸಾರಿಗೆ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಹುಟ್ಟುಹಾಕಲಿದೆ'' ಎಂದರು.