ಬೆಂಗಳೂರು :ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ಏರುತ್ತಿರುವುದರ ನಡುವೆ ಆಕ್ರಮ ನಗದು ಹಣ, ಉಚಿತ ಉಡುಗೊರೆ, ಚಿನ್ನ, ಬೆಳ್ಳಿ, ವಜ್ರಾಭವರಣ, ಮದ್ಯ ಸೇರಿದಂತೆ ಈವರೆಗೆ 55.76 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುವ ಕುರಿತು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.
ಚುನಾವಣಾ ವೇಳಾಪಟ್ಟಿ ಪ್ರಕಟವಾದ ಮಾರ್ಚ್ 16 ರಿಂದ ಮಾ. 26ರ ವರೆಗೆ ಒಟ್ಟು 55.76 ಕೋಟಿ ರೂ. ಮೌಲ್ಯದ ನಗದು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ನೀಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ 14 ದಿನಗಳ ಅವಧಿಯಲ್ಲಿ 26.54 ಕೋಟಿ ರೂ. ಮೊತ್ತದ ನಗದು ಹಣ, ಮದ್ಯ ಹಾಗೂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿತ್ತು. ಪ್ರಸ್ತುತ ಚುನಾವಣೆ ವೇಳೆ ಕೇವಲ 10 ದಿನಗಳ ಅವಧಿಯಲ್ಲೇ ಎರಡು ಪಟ್ಟು ಹೆಚ್ಚಾಗಿದೆ.
ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್, ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ಕಾರ್ಯಾಚಣೆಯಲ್ಲಿ 19.69 ಕೋಟಿ ರೂ. ನಗದು, 3.7 ಕೋಟಿ ರೂ. ಉಚಿತ ಉಡುಗೊರೆ, 26.20 ಕೋಟಿ ರೂ. ಮೌಲ್ಯದ ಮದ್ಯ, 88 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ, 5.47 ಕೋಟಿ ರೂ. ಮೌಲ್ಯದ ಚಿನ್ನ, 26 ಲಕ್ಷ ರೂ. ಮೌಲ್ಯದ ಬೆಳ್ಳಿ, 9 ಲಕ್ಷ ರೂ. ಮೌಲ್ಯದ ವಜ್ರಾಭರವಣಗಳನ್ನು ಚುನಾವಣೆ ಸಂಬಂಧ ಜಪ್ತಿ ಮಾಡಲಾಗಿದೆ.
ಇದರ ಜೊತೆಗೆ 26.20 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು 4.76 ಕೆ.ಜಿ. ತೂಕದ 4,75,65,652 ರೂ. ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಆದಾಯ ತೆರಿಗೆ ಅಧಿಕಾರಿಗಳು 71,16,480 ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 9.74 ಕೆ.ಜಿ ತೂಕದ 5,46,82,132 ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜ್ಯದಲ್ಲಿ ನಗದು, ಮದ್ಯ, ಮಾದಕ ದ್ರವ್ಯ, ಉಚಿತ ಉಡುಗೊರೆ, ಚಿನ್ನ, ಬೆಳ್ಳಿ ಆಭರಣಗಳಿಗೆ ಸಂಬಂಧಿಸಿದಂತೆ 847 ಎಫ್‍ಐಆರ್ ಗಳನ್ನು ದಾಖಲಿಸಲಾಗಿದೆ. 92,664 ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಿದ್ದು, 875 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 15 ಶಸ್ತ್ರಾಸ್ತ್ರಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ. ಅಬಕಾರಿ ಇಲಾಖೆ ಘೋರ ಅಪರಾಧದಡಿಯಲ್ಲಿ 848 ಪ್ರಕರಣಗಳನ್ನು ದಾಖಲಿಸಲಾಗಿದೆ. ಪರವಾನಗಿ ಉಲ್ಲಂಘನೆಯಡಿಯಲ್ಲಿ 706 ಪ್ರಕರಣ ದಾಖಲಿಸಿದ್ದು, ಎನ್‍ಡಿಪಿಎಸ್ ಅಡಿಯಲ್ಲಿ 44 ಪ್ರಕರಣಗಳನ್ನು, ಅಬಕಾರಿ ಕಾಯ್ದೆಯಡಿ 3,013 ಪ್ರಕರಣಗಳನ್ನು ದಾಖಲಿಸಲಾಗಿದೆ. 492 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕ್ಷಿಪ್ರ ಪಡೆಯವರು ಶ್ರವಣಬೆಳಗೊಳದ ಬಳಿ 56,89,146 ರೂ. ನಗದನ್ನು ಹಾಗು ಸ್ಥಿರ ಕಣ್ಗಾವಲು ತಂಡದವರು ಚಿತ್ರದುರ್ಗದ ಪಿಳ್ಳೇಕೇರನಹಳ್ಳಿ ಚೆಕ್ ಪೋಸ್ಟ್ ನಲ್ಲಿ 20,35,000 ನಗದನ್ನು ವಶಪಡಿಸಿಕೊಂಡಿದ್ದಾರೆ. ತರೀಕೆರೆ ತಾಲ್ಲೂಕಿನ ಎಂ.ಸಿ.ಹಳ್ಳಿ ಚೆಕ್ ಪೋಸ್ಟ್ ನಲ್ಲಿ ಸ್ಥಿರ ಕಣ್ಗಾವಲು ತಂಡದವರು 4,21,92,752 ರೂ. ಮೌಲ್ಯದ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ :ನಾಮಪತ್ರ ಸಲ್ಲಿಕೆ ಕೇಂದ್ರಗಳ ಸುತ್ತಮುತ್ತ 144 ಸೆಕ್ಷನ್ ಜಾರಿ - Nomination Centers