ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮತ್ತೊಂದು ಬಲಿಯಾಗಿದೆ. ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಕೊಪ್ಪ ತಾಲೂಕಿನ ಬಿಂತ್ರವಳ್ಳಿ ಗ್ರಾಮದ ರತ್ನ (68) ಮಂಗನ ಕಾಯಿಲೆಗೆ ಬಲಿಯಾದ ವೃದ್ಧೆ. ವೃದ್ಧೆಗೆ ಮಂಗನ ಕಾಯಿಲೆ ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಬಳಿಕ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ವೃದ್ಧೆಯ ಸಾವಿನಿಂದ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ. ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಮಂಗನಕಾಯಿಲೆ ಹೆಚ್ಚುತ್ತಿದೆ. ಕೊಪ್ಪ , ಎನ್‌ಆರ್ ಪುರ, ಶೃಂಗೇರಿ ತಾಲೂಕಿನಲ್ಲಿ ಕಾಯಿಲೆ ಹೆಚ್ಚಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ11 ಕೆಎಫ್‌ಡಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆ ಭೀತಿ: ಡಿಹೆಚ್ಒ ಹೇಳಿದ್ದೇನು?
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ವೃದ್ಧ ಬಲಿ: ಇತ್ತೀಚಿಗೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ರೋಗಕ್ಕೆ 4ನೇ ಸಾವು ಸಂಭವಿಸಿತ್ತು. ಸಿದ್ದಾಪುರ ತಾಲೂಕು ಒಂದರಲ್ಲೇ ಮೂರು ಜನರು ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದರು. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಾಪುರದ ಕಲ್ಲೂರಿನ 65 ವರ್ಷದ ವೃದ್ಧ ಚಿಕಿತ್ಸೆ ಫಲಿಸದೇ ಮಾ.4 ರಂದು ಸಾವನ್ನಪ್ಪಿದ್ದರು.
ಸಿದ್ದಾಪುರದಲ್ಲಿ ಮಂಗನ ಕಾಯಿಲೆ ಹರಡುವ ಪ್ರಮಾಣ ಏರುತ್ತಿದೆ. ಇದಲ್ಲದೇ ಶಿರಸಿಯಲ್ಲೂ ಒಂದು ದಿನದ ಹಿಂದಷ್ಟೇ ವೃದ್ಧರೊಬ್ಬರು ಮೃತಪಟ್ಟಿದ್ದರು. ಇದರಿಂದ ಕ್ರಮೇಣ ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡಿತ್ತು. ಲಸಿಕೆ ಇಲ್ಲದಿರೋದೇ ಪ್ರಮುಖ ಕಾರಣವಾಗಿದ್ದು, ಪ್ರಕರಣಗಳ ಸಂಖ್ಯೆ ಏರುತ್ತಿದ್ದರೂ ಸರ್ಕಾರ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಸಿದ್ದಾಪುರದಲ್ಲಿ ಮಂಗನ ಕಾಯಿಲೆ ಹರಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭೇಟಿ ನೀಡಿಲ್ಲ ಎಂದು ಜನರ ಅಸಮಾಧಾನ ವ್ಯಕ್ತಪಡಿಸಿದ್ದರು.