ಕರ್ನಾಟಕ

karnataka

ETV Bharat / state

ಮುಡಾ ಮಾಜಿ ಆಯುಕ್ತ ನಟೇಶ್ ಇ.ಡಿ ವಶಕ್ಕೆ - MUDA SCAM

ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಮುಡಾ ಮಾಜಿ ಆಯುಕ್ತ ನಟೇಶ್‌ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ.

ಮುಡಾ ಮಾಜಿ ಆಯುಕ್ತ ನಟೇಶ್
ಮುಡಾ ಮಾಜಿ ಆಯುಕ್ತ ನಟೇಶ್ (ETV Bharat)

By ETV Bharat Karnataka Team

Published : Oct 29, 2024, 10:27 PM IST

ಬೆಂಗಳೂರು:ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಅಕ್ರಮ ಹಂಚಿಕೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು, ಮುಡಾ ಮಾಜಿ ಆಯುಕ್ತ ಡಾ.ಬಿ.ಡಿ.ನಟೇಶ್ ಅವರನ್ನು ವಶಕ್ಕೆ ಪಡೆದು ಶಾಂತಿನಗರದ ಕಚೇರಿಗೆ ಕರೆದೊಯ್ದಿದ್ದಾರೆ.

ಬೆಂಗಳೂರು ನಗರ ಮತ್ತು ಮೈಸೂರಿನಲ್ಲಿ ಹಲವು ಕಡೆಗಳಲ್ಲಿ ನಿನ್ನೆ ಬೆಳಗ್ಗೆ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು, ಮುಡಾ ಸೈಟ್ ಹಂಚಿಕೆ ಅಕ್ರಮ ಪ್ರಕರಣದ ದಾಖಲೆ ಪತ್ರಗಳನ್ನು ಜಾಲಾಡಿ ವಶಕ್ಕೆ ಪಡೆದಿದ್ದಾರೆ.

ಮಲ್ಲೇಶ್ವರ 10ನೇ ಕ್ರಾಸ್​ನಲ್ಲಿರುವ ನಟೇಶ್ ಮನೆ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಸತತ 33 ಗಂಟೆಗಳ ಪರಿಶೀಲನೆ ನಡೆಸಿದ್ದಾರೆ. ಎರಡು ಬ್ಯಾಗ್‌ನಲ್ಲಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಇದಾದ ಮೇಲೆ ಮಧ್ಯಾಹ್ನ ನಟೇಶ್ ಅವರನ್ನು ವಿಚಾರಣೆಗೆ ಸಹಕರಿಸದ ಆರೋಪದ ಮೇಲೆ ವಶಕ್ಕೆ ಪಡೆದು ಶಾಂತಿನಗರದ ಇ.ಡಿ. ಕಚೇರಿಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಮುಡಾ ಆಯುಕ್ತರಾಗಿದ್ದ ಸಮಯದಲ್ಲಿ 50:50ರ ಅನುಪಾತದಲ್ಲಿ 928 ಸೈಟ್‌ಗಳು ಅಕ್ರಮ ಹಂಚಿಕೆಯಾಗಲು ಡಿ.ಬಿ.ನಟೇಶ್ ಅವರೇ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನಟೇಶ್‌ ಮನೆ ಮೇಲೆ ಇ.ಡಿ ದಾಳಿ ನಡೆಸಿದೆ.

ಮತ್ತೊಂದೆಡೆ, ಜೆ.ಪಿ.ನಗರದ ಎನ್.ಕಾರ್ತಿಕ್ ಡೆವಲಪರ್ ಮಾಲೀಕ ಎನ್.ಮಂಜುನಾಥ್ ಮನೆ ಮೇಲೆ ದಾಳಿ ಮಾಡಿದೆ. ಬಾಣಸವಾಡಿ ದೀಪಿಕಾ ರಾಯನ್ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಮನೆ, ಕಚೇರಿಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದರು.

ಮೈಸೂರಿನಲ್ಲಿ ಕಾರ್ತಿಕ್ ಬಡಾವಣೆ ಹೆಸರಿನಲ್ಲಿ ಲೇಔಟ್ ನಿರ್ಮಾಣ ಮಾಡಿದ್ದ ಮಂಜುನಾಥ್, 50:50 ಅನುಪಾತದಲ್ಲಿ ಸೈಟ್ ಹಂಚಿಕೆ ವೇಳೆ ಮುಡಾ ಅಧಿಕಾರಿಗಳಿಗೆ ಲಂಚ ಕೊಟ್ಟು ಸೈಟ್‌ಗಳನ್ನು ಕಬಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಧಿಕಾರಿಗಳಿಗೆ ಹಣ ಎಣಿಸಿಕೊಡುತ್ತಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಮುಡಾದಿಂದ ಗುತ್ತಿಗೆ ಪಡೆದು ಹಲವು ಲೇಔಟ್ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಬಿಲ್ಡರ್ ಮಂಜುನಾಥ್ ಮನೆ ಮೇಲೆ ದಾಳಿ ನಡೆಸಿ ಮನೆ, ಬ್ಯಾಂಕ್‌ನಲ್ಲಿನ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಮುಡಾದಲ್ಲಿ ಮೂಲ ದಾಖಲೆಗಳೇ ಕಾಣೆಯಾಗಿವೆ: ಆರ್​ಟಿಐ ಕಾರ್ಯಕರ್ತ ಗಂಗರಾಜು

ABOUT THE AUTHOR

...view details