ಇಡಿ ದಾಳಿ ಮುಕ್ತಾಯದ ಬಳಿಕ ಅಪಾರ್ಟ್ಮೆಂಟ್ನಿಂದ ಹೊರಬಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪಂಪಣ್ಣ (ETV Bharat) ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ರಾಯಚೂರಿನಲ್ಲಿ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ತಂಡ ನಿನ್ನೆ ತಡರಾತ್ರಿ ಶೋಧ ಕಾರ್ಯ ಮುಕ್ತಾಯಗೊಳಿಸಿತು.
ನಗರದ ಆಶಾಪುರ ರಸ್ತೆಯಲ್ಲಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹಾಗೂ ಅವರ ಮಾಜಿ ಪಿಎ ಪಂಪಣ್ಣ ಎಂಬವರ ನಿವಾಸಗಳ ಮೇಲೆ ಎರಡು ತಂಡಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸತತ 40 ಗಂಟೆಗಳ ಕಾಲ ದಾಖಲೆಗಳ ಪರಿಶೀಲನೆ ನಡೆದಿದೆ. ಕಾರ್ಯಾಚರಣೆ ಮುಗಿದ ಬಳಿಕ ಪಂಪಣ್ಣ ರಾಠೋಡ್ ಅವರನ್ನು ದದ್ದಲ್ ಮನೆಯಲ್ಲಿಯೇ ಬಿಟ್ಟು ಹೋದರು. ಇಡಿ ಅಧಿಕಾರಿಗಳು ಹೋದ ಬಳಿಕ ಅವರು ಏಕಾಂಗಿಯಾಗಿ ಅಪಾರ್ಟ್ಮೆಂಟ್ಮೆಂಟ್ನಿಂದ ಹೊರಬಂದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪಂಪಣ್ಣ ರಾಠೋಡ್, "ಪ್ರಕರಣ ತನಿಖಾ ಹಂತದಲ್ಲಿದೆ. ಸಾರ್ವಜನಿಕವಾಗಿ ಮಾತನಾಡಬಾರದು. ಕರೆದಾಗ ಬರಲು ಸೂಚನೆ ನೀಡಿದ್ದಾರೆ. ಎರಡು ದಿನಗಳಿಂದ ಅಧಿಕಾರಿಗಳು ನನ್ನ ಮನೆಯಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದ ಆಫೀಸರ್ ಒಬ್ಬರು ನನ್ನ ಹೆಸರು ಹೇಳಿದ್ದಾರೆ. ಹೀಗಾಗಿ ಅಧಿಕಾರಿಗಳು ದಿಢೀರ್ ಬಂದರು. ನನ್ನ ಮನೆಯಲ್ಲಿ ಪಿನ್ ಟೂ ಪಿನ್ ಚೆಕ್ ಮಾಡಿದ್ದಾರೆ. ನನ್ನಲ್ಲಿದ್ದ ಕೆಲವು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇನೆ" ಎಂದರು.
ಇದನ್ನೂ ಓದಿ:ವಾಲ್ಮೀಕಿ ನಿಗಮ ಹಗರಣ: ಕಾಂಗ್ರೆಸ್ ಶಾಸಕ ದದ್ದಲ್ ಮನೆಯಲ್ಲಿ ಮುಂದುವರೆದ ಇಡಿ ಶೋಧ - Valmiki Scam