ಮೈಸೂರು:ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆಯೊಂದರಲ್ಲಿ ಇ.ಡಿ ಅಧಿಕಾರಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
50:50 ನಿವೇಶನ ಹಂಚಿಕೆ ಹಗರಣದ ತನಿಖೆ ಸಂಬಂಧ ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ಕಚೇರಿಗೆ ಆಗಮಿಸಿರುವ ಇ.ಡಿ ಅಧಿಕಾರಿಗಳಿಂದ ಮುಡಾ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಕಚೇರಿಯಲ್ಲಿ ದಾಖಲೆ ಪರಿಶೀಲನೆ ನಡೆಯುತ್ತಿದೆ.
ಈ ಕುರಿತು ಮುಡಾದ ಕಾರ್ಯದರ್ಶಿ ಪ್ರಸನ್ನಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿ, ''ಇ.ಡಿ ಅಧಿಕಾರಿಗಳ ತಂಡ ಮುಡಾಗೆ ಭೇಟಿ ನೀಡಿದೆ. ಅವರು ಕೇಳುವ ಎಲ್ಲ ಮಾಹಿತಿಗಳನ್ನು ನೀಡುತ್ತೇವೆ. ಇಂದು ಮತ್ತು ನಾಳೆ ಇ.ಡಿ ಅಧಿಕಾರಿಗಳ ತಂಡ ಕಡತಗಳ ಪರಿಶೀಲನೆ ನಡೆಸಲಿದೆ. ಇ.ಡಿ ಅಧಿಕಾರಿಗಳು ನಿರ್ದೇಶನ ನೀಡಿದರೆ ಹೆಚ್ಚಿನ ಮಾಹಿತಿ ನೀಡುತ್ತೇವೆ. ಅಲ್ಲಿಯವರೆಗೂ ಸಹಕಾರ ನೀಡಿ'' ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮನವಿ ಮಾಡಿದರು.