ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮೂಡಾ) ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಇದೇ ಮೊದಲ ಬಾರಿಗೆ ತನಿಖೆ ಕುರಿತು ಮಾಹಿತಿ ನೀಡಿದೆ.
ಸಿಎಂ ಸೇರಿದಂತೆ ಇನ್ನಿತರರ ವಿರುದ್ಧ ಕೇಳಿ ಬಂದ ಆರೋಪಗಳಿಗೆ ಸಂಬಂಧಿಸಿದ ಮೂಡಾ ನಿವೇಶನ ಹಂಚಿಕೆ ಹಗರಣ ತನಿಖೆ ನಡೆಸುತ್ತಿರುವ ಇ.ಡಿ.ಅಧಿಕಾರಿಗಳು 300 ಕೋಟಿ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪ್ರಕರಣ ಸಂಬಂಧ ರಿಯಲ್ ಎಸ್ಟೇಟ್ ಏಜೆಂಟ್ ಉದ್ಯಮಿ ಸೇರಿದಂತೆ ವಿವಿಧ ವ್ಯಕ್ತಿಗಳ ಹೆಸರಿನಲ್ಲಿದ್ದ ಪ್ರಾಪರ್ಟಿ, ನಿವೇಶನ, ಜಮೀನು ಸೇರಿದಂತೆ ಇನ್ನಿತರ ಆಸ್ತಿ ಒಳಗೊಂಡಂತೆ 300 ಕೋಟಿ ಮೌಲ್ಯದ 142 ಸ್ಥಿರಾಸ್ತಿಯನ್ನ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಇ.ಡಿ ತಿಳಿಸಿದೆ.
ಹಗರಣದಲ್ಲಿ ಬೇನಾಮಿ ಹಾಗೂ ಪ್ರಭಾವಿಗಳ ಹೆಸರಿನಲ್ಲಿ ಸೈಟು ಮಂಜೂರು ಮಾಡುವುದಲ್ಲದೇ, ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಿರುವುದು ಕಂಡುಬಂದಿದೆ ಎಂದು ಇ.ಡಿ. ತಿಳಿಸಿದೆ.