ಮೈಸೂರು: ಅಕ್ಟೋಬರ್ 3ರಿಂದ ನಾಡಹಬ್ಬ ದಸರಾ ಮಹೋತ್ಸವದ ನಿಮಿತ್ತ ದಸರಾ ಚಲನಚಿತ್ರೋತ್ಸವ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಲಿದ್ದಾರೆ ಎಂದು ದಸರಾ ಚಲನಚಿತ್ರೋತ್ಸವದ ಉಪಸಮಿತಿ ವಿಶೇಷ ಅಧಿಕಾರಿ ಡಾ. ಬಸವರಾಜ್ ಮಾಹಿತಿ ನೀಡಿದರು.
ಇಂದು ಮೈಸೂರಿನ ಅರಣ್ಯ ಭವನದಲ್ಲಿ ದಸರಾ ಚಲನಚಿತ್ರೋತ್ಸವದ ಬಗ್ಗೆ ಮಾಹಿತಿ ನೀಡಿದ ಅವರು, ಅಕ್ಟೋಬರ್ 3ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ರಮೇಶ್ ಅರವಿಂದ್, ಡಾಲಿ ಧನಂಜಯ್, ಸಪ್ತಮಿಗೌಡ, ಶರಣ್ಯ ಶೆಟ್ಟಿ, ಅಂಕಿತ ಬೋಪಯ್ಯ ಸೇರಿದಂತೆ ಹಲವು ನಟನಟಿಯರು ಭಾಗವಹಿಸಲಿದ್ದಾರೆ. ಸಾಧುಕೋಕಿಲ ತಂಡದಿಂದ ಸಂಗೀತ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ದ್ವಾರಕೀಶ್ ನೆನಪಿನಲ್ಲಿ ಚಲನಚಿತ್ರೋತ್ಸವ: ಇತ್ತೀಚೆಗೆ ನಿಧನರಾದ ಕನ್ನಡ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಸವಿನೆನಪಿಗಾಗಿ ಈ ಬಾರಿಯ ದಸರಾ ಚಲನಚಿತ್ರೋತ್ಸ ಆಯೋಜನೆ ಮಾಡಲಾಗಿದೆ. ದ್ವಾರಕೀಶ್ ಅಭಿನಯದ ಚಲನಚಿತ್ರಗಳನ್ನು ಪ್ರದರ್ಶನ ಮಾಡಲಾಗುವುದು. ಜೊತೆಗೆ ಸಾಮಾಜಿಕ ಸಂದೇಶ ಹಾಗೂ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರಗಳನ್ನು ಸಹ ಪ್ರದರ್ಶನ ಮಾಡಲಾಗುವುದು.
ಅಕ್ಟೋಬರ್ 4 ರಿಂದ 10ರವರೆಗೆ ಬಿಎಂ ಹ್ಯಾಬಿಟೇಟ್ ಮಾಲ್ನ ಡಿಆರ್ಸಿಸಿ ನಲ್ಲಿ ಒಂದು ಸ್ಕ್ರೀನ್, ಮಾಲ್ ಆಫ್ ಮೈಸೂರ್ ಐನಾಕ್ಸ್ (INOX)ನ ಮೂರು ಸ್ಕ್ರೀನ್ನಲ್ಲಿ ಚಲನಚಿತ್ರಗಳು ಪ್ರದರ್ಶನವಾಗಲಿದೆ. ಈ ಬಾರಿ 112 ಸಿನಿಮಾಗಳು ಪ್ರದರ್ಶನಗೊಳ್ಳಲಿದೆ. ಓಲ್ಡ್ ಇಸ್ ಗೋಲ್ಡ್ ಶೀರ್ಷಿಕೆಯಲ್ಲಿ ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ಪುನೀತ್ ರಾಜ್ಕುಮಾರ್, ರಮೇಶ್ ಅರವಿಂದ್ ಸೇರಿದಂತೆ ಇತರರ ಸಿನಿಮಾಗಳ ಜತೆಗೆ ಈ ಬಾರಿ ವಿಶೇಷ ಸಿನಿಮಾಗಳಲ್ಲಿ ಭಾರತೀಯ ಅಧಿಕೃತ ಭಾಷೆಗಳ ಹಾಗೂ ಬುಡಕಟ್ಟು ಚಲನಚಿತ್ರಗಳು ಪ್ರದರ್ಶನ ಆಗಲಿವೆ.
ಮಾಲ್ ಆಫ್ ಮೈಸೂರಿನಲ್ಲಿ ಸಿನಿ-ಫೋಟೋ ಪ್ರದರ್ಶನ: ಈ ಬಾರಿ ವಿಶೇಷವಾಗಿ ಸಿನಿ ಫೋಟೋ ಪ್ರದರ್ಶನವನ್ನು ಐನಾಕ್ಸ್ ಸಿನಿಮಾಸ್ ಹೊರ ಆವರಣದಲ್ಲಿ ದಿನಾಂಕ 04-10- 2024 ರಿಂದ 10-10-2024ರವರೆಗೆ ಆಯೋಜನೆ ಮಾಡಲಾಗುವುದು.
ಐನಾಕ್ಸ್ನಲ್ಲಿ ಅತ್ಯುತ್ತಮ ಕಿರುಚಿತ್ರಗಳ (ಶಾರ್ಟ್ ಫಿಲ್ಮ್) ಪ್ರದರ್ಶನ:ಯುವಜನಾಂಗಕ್ಕೆ ಪ್ರೋತ್ಸಾಹ ನೀಡಲು ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗಿದ್ದು, ಆಯ್ಕೆಗೊಂಡ ಅತ್ಯುತ್ತಮ 10 ಕಿರುಚಿತ್ರಗಳನ್ನು ಸಹ ದೊಡ್ಡ ಪರದೆಯಲ್ಲಿ ಪ್ರದರ್ಶನ ಮಾಡಲಾಗುವುದು.
ದಿನಾಂಕ 08.10.2024ರಂದು ಕಿರುಚಿತ್ರಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಹಾಗೂ ಅತ್ಯುತ್ತಮ ಸಂಕಲನಗಾರ ಹಾಗೂ ಅತ್ಯುತ್ತಮ ಛಾಯಾಗ್ರಾಹಕರಿಗೂ ಬಹುಮಾನ ವಿತರಣೆ ಮಾಡಲಿದ್ದು, ಕಾರ್ಯಕ್ರಮದಲ್ಲಿ ಖ್ಯಾತ ನಟರಾದ ಮಂಡ್ಯ ರಮೇಶ್ ಅವರು ಭಾಗವಹಿಸಲಿದ್ದಾರೆ.