ಕರ್ನಾಟಕ

karnataka

ETV Bharat / state

ದಾವಣಗೆರೆ: ಬೀದಿ ಬೀದಿ ಚಿಂದಿ ಆಯುತ್ತಿದ್ದವರ ಬದುಕು ಬದಲಿಸಿದ ತ್ಯಾಜ್ಯ ಸಂಗ್ರಹ ಕೇಂದ್ರಗಳು - Dry Waste Collection Centers - DRY WASTE COLLECTION CENTERS

ದಾವಣಗೆರೆಯಲ್ಲಿ ಬೀದಿ ಅಲೆಯುತ್ತಾ ಚಿಂದಿ ಆಯುತ್ತಿದ್ದ ಜನರಿಂದು ಉದ್ದಿಮೆದಾರರಾಗಿದ್ದಾರೆ. ಇದಕ್ಕೆ ಕಾರಣ ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳು.

Davanagere
ನಾರಿಯರು (ETV Bharat)

By ETV Bharat Karnataka Team

Published : Jun 11, 2024, 10:00 PM IST

Updated : Jun 11, 2024, 10:48 PM IST

ತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಗೀತಾ ಮಾತನಾಡಿದರು (ETV Bharat)

ದಾವಣಗೆರೆ: ಇವರು ಚಿಂದಿ ಆಯುತ್ತಾ ಜೀವನದ ಬಂಡಿ ಸಾಗಿಸುತ್ತಿದ್ದವರು. ಚಿಂದಿ ಆಯ್ದು ಬರುವ ಅಲ್ಪಸ್ವಲ್ಪ ಹಣದಲ್ಲೇ ಜೀವನ ನಿರ್ವಹಣೆ ಮಾಡಬೇಕಿತ್ತು. ಆದರೆ ನಗರದಲ್ಲಿರುವ ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳು ಇವರ ಕೈ ಹಿಡಿದಿವೆ. ಬೀದಿ ಬೀದಿ ಅಲೆಯುತ್ತಾ ಚಿಂದಿ ಆಯುತ್ತಿದ್ದ ನಾರಿಯರೇ ಇಂದು ಉದ್ದಿಮೆದಾರರಾಗಿ ಬದಲಾಗಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳು ಸ್ವಾಭಿಮಾನಿ ಜೀವನ ಸಾಗಿಸಲು ಮಹಿಳೆಯರಿಗೆ ನೆರವಾಗಿವೆ. ಹಸಿರು ದಳ ಎಂಬ ಸಂಸ್ಥೆ ಚಿಂದಿ ಆಯುವವರನ್ನು ಗುರುತಿಸಿ, ಸಂಘಟಿಸಿ ಮುಖ್ಯವಾಹಿನಿಗೆ ತರುವಲ್ಲಿ ಮುಖ್ಯ ಪಾತ್ರವಹಿಸಿದೆ.

ಚಿಂದಿ ಆಯುತ್ತಿರುವ ಮಹಿಳೆ (ETV Bharat)

ಚಿಂದಿ ಆಯುವವರ ಸಬಲೀಕರಣಕ್ಕೆ ಮುಂದಾಗಿರುವ ಹಸಿರು ದಳ, ದಾವಣಗೆರೆಯಲ್ಲಿ 1,053 ಮಂದಿ ಚಿಂದಿ ಆಯುವವರನ್ನು ಗುರುತಿಸಿದೆ. ಈ ಪೈಕಿ 39 ಮಹಿಳೆಯರು ದಾವಣಗೆರೆ ತಾಲೂಕಿನ ಅವರಗೊಳ್ಳ ಗ್ರಾಮದ ಕಸ ವಿಲೇವಾರಿ ಘಟಕದಲ್ಲಿ ಚಿಂದಿ ಆಯ್ದು ಜೀವನ ಸಾಗಿಸುತ್ತಿದ್ದರು. ‌ಇದರಿಂದ ಅವರಿಗೆ ಬದುಕು ಸಾಗಿಸುವುದೇ ದುಸ್ತರವಾಗಿತ್ತು.

ಇಂಥ ಕಡು ಕಷ್ಟದ ದಿ‌ನಗಳಲ್ಲಿ ಮಧ್ಯಪ್ರವೇಶಿಸಿದ ಹಸಿರು ದಳ, ಅವರಗೊಳ್ಳ ಗ್ರಾಮದಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಚಿಂದಿ ಆಯುತ್ತಿದ್ದವರನ್ನು ಅಲ್ಲಿಂದ ಹೊರತರುವಲ್ಲಿ ಯಶಸ್ವಿಯಾಯಿತು. ಒಣ ಕಸವು ಚಿಂದಿ ಆಯುವವರಿಗೆ ಸೇರಿದ್ದೆಂಬ ಸುಪ್ರೀಂ ಕೋರ್ಟ್ ಆದೇಶದನ್ವಯ ಪಾಲಿಕೆ ವ್ಯಾಪ್ತಿಯ ಒಣ ಕಸ ಸಂಗ್ರಹಕ್ಕೆ ಅವರಿಗೆ ಅವಕಾಶ ನೀಡುವಂತೆ ಹಸಿರು ದಳದ ಮ್ಯಾನೇಜರ್ ಗುರುರಾಜ್ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದರು.

ಚಿಂದಿ ಆಯುತ್ತಿರುವ ಮಹಿಳೆ (ETV Bharat)

ಸದಾ ಕಸ ತ್ಯಾಜ್ಯ ಡಂಪಿಂಗ್ ಯಾರ್ಡ್​ನಲ್ಲಿ ಕಸ ಹೊತ್ತು ಬರುವ ವಾಹನಗಳಿಗೆ ಕಾಯುತ್ತಾ, ವಾಹನ ಬಂದ ತಕ್ಷಣ ಚಿಂದಿ ಆಯಲು ಓಡುತ್ತಿದ್ದವರ ಬದುಕೀಗ ಇದರಿಂದ ಬದಲಾಗಿದೆ. ಚಿಂದಿ ಆಯುತ್ತಿದ್ದವರಿಗೆ ಒಣ ಕಸ ಬೇರ್ಪಡಿಸಲು ಪಾಲಿಕೆ ಆಯುಕ್ತರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಟೌನ್​ಶಿಪ್, ಎಂಸಿಸಿ ಎ ಬ್ಲಾಕ್‌ ಸೂಪರ್ ಮಾರ್ಕೆಟ್ ಬಳಿ, ವಿನೋಬನಗರದ ನರಹರಿ ಶೇಟ್ ಬಳಿ, ಜಿಲ್ಲಾ ಕ್ರೀಡಾಂಗಣದ ಆವರಣ, ಭಗೀರಥ ವೃತ್ತ ಹೀಗೆ ಒಟ್ಟು 6 ಸ್ಥಳಗಳನ್ನು ಗುರುತಿಸಿ ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ತೆರೆದು ಚಿಂದಿ ಆಯುತ್ತಿದ್ದ ಆರು ಮಹಿಳೆಯರಿಗೆ ನಿರ್ವಹಿಸಲು ಜವಾಬ್ದಾರಿ ನೀಡಲಾಗಿತ್ತು. ಹಸಿರು ದಳ ಸಂಸ್ಥೆಯಿಂದ ತ್ಯಾಜ್ಯ ನಿರ್ವಹಣೆ ಮಾಡುವುದರ ಬಗ್ಗೆ ಈ ಮಹಿಳೆಯರಿಗೆ ತರಬೇತಿ ನೀಡಲಾಯಿತು.

"ಚಿಂದಿ ಆಯುತ್ತಿದ್ದವರನ್ನು ಗುರುತಿಸಿ, ಪಾಲಿಕೆಯೊಂದಿಗೆ ಮಾತನಾಡಿ ಒಣ ತ್ಯಾಜ್ಯ ಸಂಗ್ರಹ ಘಟಕ ತೆರೆಸಿ, ಉದ್ದಿಮೆದಾರರನ್ನಾಗಿ ಮಾಡಲಾಗಿದೆ. ಒಟ್ಟು 6 ಕೇಂದ್ರಗಳನ್ನು ತೆರೆದು ಕೆಲಸ ಕೊಡಲಾಗಿದೆ. ಒಣ ಕಸ ಸಂಗ್ರಹಿಸಿ ಅದರಲ್ಲಿ ಬರುವ ವಸ್ತುಗಳನ್ನು ವಿಂಗಡಿಸಿ ಅವುಗಳಿಂದ ಆದಾಯ ಪಡೆಯುತ್ತಿದ್ದಾರೆ. ಇದಕ್ಕಾಗಿ ತರಬೇತಿ ನೀಡಲಾಗಿದೆ" ಎಂದು ಗುರುರಾಜ್ ಮಾಹಿತಿ ನೀಡಿದರು.

ಚಿಂದಿ ಆಯುವವರು ಉದ್ದಿಮೆದಾರರಾಗಿ ಬದಲು:ಇದೀಗಪ್ರತಿಯೊಬ್ಬ ಮಹಿಳೆ ತಲಾ ಒಂದೊಂದು ಒಣ ತ್ಯಾಜ್ಯ ಸಂಗ್ರಹ ಕೇಂದ್ರದ ಹೊಣೆ ಹೊತ್ತಿದ್ದಾರೆ. ತಮ್ಮ ವಾರ್ಡ್‌ಗಳ ಮನೆಗೆ ತೆರಳುವ ಇವರು ಕಸ ಸಂಗ್ರಹಿಸುವ ವಾಹನಗಳಲ್ಲಿ ತೆರಳಿ, ಜನಸಾಮಾನ್ಯರು ನೀಡುವ ಒಣ ಕಸ ಸಂಗ್ರಹಿಸಿ, ಅದನ್ನು ಒಣ ತ್ಯಾಜ್ಯ ಕೇಂದ್ರಕ್ಕೆ ತಂದು ಪ್ಲಾಸ್ಟಿಕ್ ಬಾಟಲ್, ಪ್ಯಾಕೆಟ್, ತೆಂಗಿನ ಚಿಪ್ಪು,‌ ಹಾಲಿನ ಪ್ಯಾಕೆಟ್, ನೀರಿನ ಖಾಲಿ ಬಾಟಲ್​ಗಳನ್ನಾಗಿ ವಿಂಗಡಿಸುತ್ತಾರೆ. ಇಲ್ಲಿ ವಿಂಗಡಿಸಿದ ವಸ್ತುಗಳನ್ನು ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ತಿಂಗಳಿಗೆ 15-20 ಸಾವಿರ ರೂ ಗಳಿಸಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಈ ಕುರಿತು ಒಣ ತ್ಯಾಜ್ಯ ಸಂಗ್ರಹಿಸಿ ಜೀವನ ನಡೆಸುತ್ತಿರುವ ಗೀತಾ ಮಾತನಾಡಿ, "ಕಸ ವಿಲೇವಾರಿ ಘಟಕದಲ್ಲಿ ಚಿಂದಿ ಆಯ್ದು ಜೀವನ ನಡೆಸುವುದೇ ಕಷ್ಟಕರವಾಗಿತ್ತು. ಹಸಿರು ದಳ ಸಂಸ್ಥೆ ಸಾಕಷ್ಟು ಪ್ರಯತ್ನಿಸಿ ನಮ್ಮನ್ನು ಉದ್ದಿಮೆದಾರರನ್ನಾಗಿ ಮಾಡಿದೆ. ಪ್ರತೀ ತಿಂಗಳಿಗೆ 15-20 ಸಾವಿರ ದುಡಿಯುತ್ತಿದ್ದೇವೆ. ಅಲ್ಲದೇ ಸುಖಕರ ಜೀವನ ನಡೆಸುತ್ತಾ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದೇವೆ'' ಎಂದರು.

ಇದನ್ನೂ ಓದಿ:ಬಿಬಿಎಂಪಿ ವ್ಯಾಪ್ತಿಯಲ್ಲಿ ಒಣ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ: 18 ಸಿಎನ್‌ಜಿ ವಾಹನಗಳಿಗೆ ಚಾಲನೆ

Last Updated : Jun 11, 2024, 10:48 PM IST

ABOUT THE AUTHOR

...view details