ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ ಅತಿಹೆಚ್ಚು ಗೋಶಾಲೆ ಆರಂಭ: 9 ಸಾವಿರ ಜಾನುವಾರುಗಳಿಗೆ ಆಶ್ರಯ - Drought management - DROUGHT MANAGEMENT

ಬರ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿಗೆ ಯಾವುದೇ ಕೊರತೆಯಾಗದಂತೆ ಚಾಮರಾಜನಗರ ಜಿಲ್ಲಾಡಳಿತ ಕ್ರಮವಹಿಸಿದೆ.

ಚಾಮರಾಜನಗರದಲ್ಲಿ ಅತಿಹೆಚ್ಚು ಗೋಶಾಲೆ ಆರಂಭ: 9 ಸಾವಿರ ಜಾನುವಾರುಗಳಿಗೆ ಆಶ್ರಯ
ಚಾಮರಾಜನಗರದಲ್ಲಿ ಅತಿಹೆಚ್ಚು ಗೋಶಾಲೆ ಆರಂಭ: 9 ಸಾವಿರ ಜಾನುವಾರುಗಳಿಗೆ ಆಶ್ರಯ (ETV Bharat)

By ETV Bharat Karnataka Team

Published : May 8, 2024, 1:57 PM IST

ಚಾಮರಾಜನಗರ: ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಜನ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗೆ ಯಾವುದೇ ಕೊರತೆಯಾಗದಂತೆ ಜಿಲ್ಲಾಡಳಿತ ವತಿಯಿಂದ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.

ಬರ ನಿರ್ವಹಣೆ ಸಂಬಂಧ ಪ್ರಕಟಣೆ ಮೂಲಕ ಅವರು ಮಾಹಿತಿ ಕೊಟ್ಟಿದ್ದು,‌ ಗುಂಡ್ಲುಪೇಟೆ, ಹನೂರು ಮತ್ತು ಚಾಮರಾಜನಗರ ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಹಾಗೂ ಕೊಳ್ಳೇಗಾಲ, ಯಳಂದೂರು ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ತಾಲ್ಲೂಕುಗಳೆಂದು ಸರ್ಕಾರವು ಈಗಾಗಲೇ ಘೋಷಿಸಿದೆ. ಬರ ನಿರ್ವಹಣೆ ಸಂದರ್ಭದಲ್ಲಿ ಅನೇಕ ತುರ್ತು ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿರುವ ನಿಟ್ಟಿನಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಸಾರ್ವಜನಿಕರಿಂದ ಬರುವ ದೂರುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ ಎಂದಿದ್ದಾರೆ.

ಬರ ನಿರ್ವಹಣೆ (ETV Bharat)

ಹೀಗಿದೆ ಕುಡಿಯುವ ನೀರಿನ ನಿರ್ವಹಣೆ; ಜಿಲ್ಲೆಯ ಬರ ನಿರ್ವಹಣೆಗೆ ಸಂಬಂಧಪಟ್ಟಂತೆ ಗ್ರಾಮೀಣ ಭಾಗದ ಸಾರ್ವಜನಿಕರ ಕುಡಿಯುವ ನೀರಿನ ನಿರ್ವಹಣೆಗಾಗಿ 2024ರ ಫೆಬ್ರವರಿಯಲ್ಲಿ ಜಿಲ್ಲೆಯಾದ್ಯಂತ ಸರ್ವೆ ಕಾರ್ಯ ನಡೆಸಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಂಬಂಧ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ (ಚಾಮರಾಜನಗರ-48, ಗುಂಡ್ಲುಪೇಟೆ-17, ಹನೂರು-15, ಕೊಳ್ಳೇಗಾಲ-20, ಯಳಂದೂರು-11) ಹಾಗೂ ತುರ್ತು ಸಂದರ್ಭದಲ್ಲಿ ಕುಡಿಯುವ ನೀರಿನ ಕೊರತೆಯನ್ನು ನಿವಾರಿಸಲು 69 ಖಾಸಗಿ ಹೆಚ್ಚುವರಿ ಇಳುವರಿ ಕೊಡುವ ಬೋರ್ವೆಲ್‍ಗಳನ್ನು ಗುರುತಿಸಿ (ಚಾಮರಾಜನಗರ-17, ಗುಂಡ್ಲುಪೇಟೆ-16, ಕೊಳ್ಳೇಗಾಲ-11, ಯಳಂದೂರು 11 ಹಾಗೂ ಹನೂರು-14) ಖಾಸಗಿ ಬೋರ್ವೆಲ್‍ಗಳ ಮಾಲೀಕರಿಂದ ಈಗಾಗಲೇ ಒಪ್ಪಂದ ಪತ್ರಗಳನ್ನು ಪಡೆಯಲಾಗಿದೆ.

ಅವಶ್ಯವಿರುವ ಕಡೆ ಈಗಾಗಲೇ ಖಾಸಗಿ ಬೋರ್​ವೆಲ್‍ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಜಿಲ್ಲಾ ಕೇಂದ್ರದಲ್ಲಿ ಸಹಾಯವಾಣಿ ಕೇಂದ್ರವನ್ನು ತೆರೆದು ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವುಗಳ ಪೂರೈಕೆಗೆ ಸಂಬಂಧಪಟ್ಟಂತೆ ಸಂಪರ್ಕಿಸಲು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಬರ ನಿರ್ವಹಣೆ (ETV Bharat)

ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಚಾಮರಾಜನಗರ ನಗರಸಭೆಯ 10 ವಾರ್ಡ್‍ಗಳಲ್ಲಿ ಒಟ್ಟು 86 ಟ್ಯಾಂಕರ್ ನೀರನ್ನು, ಗುಂಡ್ಲುಪೇಟೆ ಪುರಸಭೆಯ ಒಟ್ಟು 10 ವಾರ್ಡ್‍ಗಳಲ್ಲಿ 376 ಟ್ಯಾಂಕರ್ ನೀರನ್ನು ಹಾಗೂ ಹನೂರು ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 6 ವಾರ್ಡ್‍ಗಳಲ್ಲಿ 9 ಟ್ಯಾಂಕರ್ ನೀರನ್ನು ಸರಬರಾಜು ಮಾಡಲಾಗಿದೆ. ಗುಂಡ್ಲುಪೇಟೆ ಪುರಸಭೆಗೆ ಸಂಬಂಧಪಟ್ಟಂತೆ ಕಬಿನಿ ಕುಡಿಯುವ ನೀರಿನ ಸಂಬಂಧ ದುರಸ್ತಿ ಮಾಡಿಸಲು ಸಾಧ್ಯವಿಲ್ಲದ ಮೋಟಾರ್ ಅನ್ನು ತೆಗೆದು ಹಾಕಿ ಟೆಂಡರ್ ಮೂಲಕ ಹೊಸ ಮೋಟಾರನ್ನು ಖರೀದಿಸಿ ಅಳವಡಿಸಿ ಗುಂಡ್ಲುಪೇಟೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲಾಗಿದೆ.

ಗ್ರಾಮೀಣ ಭಾಗದಲ್ಲಿ ಹನೂರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಕುಡಿಯುವ ನೀರನ್ನು ಒಟ್ಟು 157 ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗಿದೆ. ಅದರಲ್ಲೂ ಅತೀ ಹೆಚ್ಚಾಗಿ ಮಲೆ ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೊಕ್ಕೆಬೊರೆ, ಇಂಡಿಗನತ್ತ, ಮಂದಾರೆ ಗ್ರಾಮಗಳಿಗೆ ಸರಬರಾಜು ಮಾಡಲಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನ ನೇನೇಕಟ್ಟೆ, ಪಂಜನಹಳ್ಳಿ ಗ್ರಾಮಗಳಿಗೆ ತುರ್ತು ಸಂದರ್ಭದಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗಿದೆ.

ಬರ ನಿರ್ವಹಣೆ (ETV Bharat)

ಅತಿಹೆಚ್ಚು ಗೋಶಾಲೆ:ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವುಗಳ ಸಂಬಂಧ ಜಿಲ್ಲಾಡಳಿತ ವತಿಯಿಂದ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಜಿಲ್ಲೆಯಾದ್ಯಂತ 31,943 ಮೇವಿನ ಕಿಟ್‍ಗಳನ್ನು ಅರ್ಹ 14,045 ರೈತರಿಗೆ ವಿತರಿಸಲಾಗಿದೆ. ಈಗಾಗಲೇ ಹಲವು ರೈತರು ಜಾನುವಾರುಗಳಿಗೆ ಮೇವಿನ ಬೆಳೆಯನ್ನು ಬೆಳೆದಿರುತ್ತಾರೆ.

ಬರ ನಿರ್ವಹಣೆ (ETV Bharat)

ಬರ ನಿರ್ವಹಣೆ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ರೈತರ ಜಾನುವಾರುಗಳ ಮೇವಿನ ಸಮಸ್ಯೆಗಳಿಗೆ ಸ್ಪಂದಿಸಿ ರಾಜ್ಯದಲ್ಲಿಯೇ ಅತೀ ಹೆಚ್ಚು ಗೋಶಾಲೆಗಳನ್ನು ತೆರೆದು ಜಾನುವಾರುಗಳಿಗೆ ಮೇವನ್ನು ಒದಗಿಸಲಾಗುತ್ತಿದೆ. ಹನೂರು ತಾಲ್ಲೂಕಿನಲ್ಲಿ ಈಗಾಗಲೇ 17 ಗೋಶಾಲೆಗಳನ್ನು ತೆರೆದು 9,546 ದೊಡ್ಡ ಜಾನುವಾರುಗಳಿಗೆ ಮೇವು ಒದಗಿಸಿ ಆಶ್ರಯ ಕಲ್ಪಿಸಲಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅವಶ್ಯವಿದ್ದ 1 ಕಡೆ ಮೇವು ನಿಧಿಯನ್ನು ತೆರೆದು 947 ರೈತರಿಗೆ 115 ಟನ್, ಚಾಮರಾಜನಗರ ತಾಲ್ಲೂಕಿನಲ್ಲಿ 228 ರೈತರಿಗೆ 51.92 ಟನ್ ಸೇರಿದಂತೆ 1175 ರೈತರಿಗೆ ಒಟ್ಟು 166.74 ಟನ್​ಗಳಷ್ಟು ಮೇವನ್ನು ಮೇವು ಬ್ಯಾಂಕ್ ನಿಧಿಯಿಂದ ವಿತರಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಇದನ್ನೂ ಓದಿ:ಹುಲಿ‌ ದಾಳಿಯಿಂದ ಪಾರಾದ ಕಾಡೆಮ್ಮೆ: ಬಂಡೀಪುರ ಸಫಾರಿ ವಿಡಿಯೋ ವೈರಲ್

ABOUT THE AUTHOR

...view details