ಬೆಂಗಳೂರು:ಪ್ರಯಾಣಿಕನೊಬ್ಬ ಬಾಂಬ್ ಇಟ್ಟು ಹೋಗಿದ್ದಾನೆ ಎಂದು ಆಟೋ ಸಮೇತ ಚಾಲಕನೊಬ್ಬ ಪೊಲೀಸ್ ಠಾಣೆಗೆ ಬಂದ ಸನ್ನಿವೇಶ ನಡೆದಿದೆ. ಕೊನೆಗೆ ಮೈದಾನದಲ್ಲಿ ಆಟೋ ನಿಲ್ಲಿಸಿ ಬಾಂಬ್ ಪತ್ತೆ ದಳವನ್ನು ಕರೆಸಿ ತಪಾಸಣೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಎಂದು ಬೆಳಕಿಗೆ ಬಂದಿದೆ.
ಜಯನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದಿದೆ. ಪ್ರಯಾಣಿಕ ಆಟೋದಲ್ಲಿ ಪ್ರಯಾಣಿಸಿ ಅದರಲ್ಲಿ ಅನುಮಾನಾಸ್ಪದ ವಸ್ತುಗಳನ್ನು ಬಿಟ್ಟು ಹೋಗಿದ್ದಾನೆ. ಸ್ವಲ್ಪ ದೂರವಾದ ಮೇಲೆ ಆಟೋ ಚಾಲಕ, ಅದನ್ನು ಗಮನಿಸಿ ಭಯಗೊಂಡು ಜಯನಗರ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾನೆ. ವಿಷಯ ತಿಳಿದ ಪೊಲೀಸರು, ಜಯನಗರದ ಬಿಎಸ್‌ಎನ್‌ಎಲ್ ಟೆಲಿಪೋನ್ ಎಕ್ಸ್ ಚೇಂಜ್ ಎದುರು ಇರುವ ಆಟದ ಮೈದಾನಕ್ಕೆ ಆಟೋ ತೆಗೆದುಕೊಂಡು ಬರುವಂತೆ ಸೂಚಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾಂಬ್ ಸ್ಕ್ವಾಡ್ ಸಿಬ್ಬಂದಿಯಿಂದ ಪರಿಶೀಲನೆ:ಅಲ್ಲಿಗೆ ಆಟೋ ತಂದು ನಿಲ್ಲಿಸಿದ ಮೇಲೆ ಬಾಂಬ್ ಸ್ಕ್ವಾಡ್ ಸಿಬ್ಬಂದಿಯನ್ನು ಕರೆಸಿ ಪರಿಶೀಲನೆ ಮಾಡಿದಾಗ ಆಟೋದ ಹಿಂದಿನ ಸೀಟ್‌ನಲ್ಲಿ ಎರಡು ಚೀಲಗಳು ಪತ್ತೆ ಆಗಿವೆ. ಬ್ಯಾಗ್ ತೆರೆದು ನೋಡಿದಾಗ ಡ್ರಿಲ್ಲಿಂಗ್ ಮಷಿನ್ ಬಿಡಿ ಭಾಗಗಳು ಕಂಡುಬಂದಿವೆ. ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಸ್ಫೋಟಕ ವಸ್ತುಗಳು ಇಲ್ಲವೆಂದು ತಿಳಿದಾಗ ನಾಲ್ಕೈದು ತಾಸು ಆತಂಕದಲ್ಲಿದ್ದ ಆಟೋ ಚಾಲಕ ಹಾಗೂ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.
ಇತ್ತೀಚೆಗೆ ಪದೇ ಪದೆ ಹುಸಿ ಬಾಂಬ್ ಬೆದರಿಕೆ ಕರೆಗಳು ಬರುತ್ತಿದ್ದವು. ಶಾಲಾ, ಕಾಲೇಜು, ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಬಂದಿದ್ದವು. ಇದೇ ಗುಂಗಿನಲ್ಲಿದ್ದ ಆಟೋ ಚಾಲಕ ತನ್ನ ಆಟೋದಲ್ಲಿ ಪತ್ತೆಯಾದ ಅನುಮಾನಾಸ್ಪದ ವಸ್ತು ಕಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ:ಬೆಂಗಳೂರು: ಶಾಲೆಗೆ ಹೋಗದೇ ಮೊಬೈಲ್ ನೋಡುತ್ತಿದ್ದ ಮಗ, ಪುತ್ರನ ಹತ್ಯೆ ಮಾಡಿದ ತಂದೆಯ ಬಂಧನ