ಕರ್ನಾಟಕ

karnataka

ETV Bharat / state

ದಾವಣಗೆರೆಯ ಕಂದನಕೋವಿಯಲ್ಲಿ ಕುಡಿವ ನೀರಿಗೆ ತತ್ವಾರ, ಯುವಕರಿಗೆ ಹೆಣ್ಣು ಕೊಡಲು ಹಿಂದೇಟು: ಆರೋಪ - drink water problem - DRINK WATER PROBLEM

ಕಂದನಕೋವಿ ಗ್ರಾಮದಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು ಎಂದು ಒತ್ತಾಯಿಸಿ ಯುವಕರು, ಗ್ರಾಮಸ್ಥರು ಹಾಗು ಮಹಿಳೆಯರು ಸ್ಥಳೀಯ ಗ್ರಾಪಂಗೆ ಬೀಗ ಜಡಿದು ಇಂದು ಆಕ್ರೋಶ ವ್ಯಕ್ತಪಡಿಸಿದರು.

Villagers and women protested by locking Kandanakovi gram panchayat
ಕಂದನಕೋವಿ ಗ್ರಾಪಂಗೆ ಬೀಗ ಜಡಿದು ಗ್ರಾಮಸ್ಥರು, ಮಹಿಳೆಯರು ಪ್ರತಿಭಟಿಸಿದರು. (Etv Bharat)

By ETV Bharat Karnataka Team

Published : May 8, 2024, 9:01 PM IST

ಕಂದನಕೋವಿ ಗ್ರಾಮದಲ್ಲಿ ಕುಡಿವ ನೀರಿಗೆ ತತ್ವಾರ (ETV Bharat)

ದಾವಣಗೆರೆ:ಭೀಕರ ಬರ, ಬೇಸಿಗೆಯಿಂದಾಗಿ ರಾಜ್ಯದ ಎಲ್ಲ ಕಡೆ ನೀರಿಗೆ ಹಾಹಾಕಾರ ಉದ್ಭವಿಸಿದೆ‌. ಆದರೆ, ದಾವಣಗೆರೆ ತಾಲೂಕಿನ ಕಂದನಕೋವಿ ಗ್ರಾಮದಲ್ಲಿ ನೀರಿನ ಸಮಸ್ಯೆಯಿಂದಾಗಿ ಗ್ರಾಮಸ್ಥರು ನಿತ್ಯ ರೋಸಿ ಹೋಗಿದ್ದಾರೆ. ಗ್ರಾಮದಲ್ಲಿ 200 ಮನೆಗಳಿದ್ದು, ಗ್ರಾಮಸ್ಥರು ದೂರದ ತೋಟಗಳಲ್ಲಿರುವ ಕೊಳವೆ ಬಾವಿಗಳಿಗೆ ಹೋಗಿ ನೀರು ತಂದು ಜೀವನ ಸಾಗಿಸುತ್ತಿದ್ದಾರೆ.

ಗ್ರಾಪಂಗೆ ಬೀಗ ಜಿಡಿದು ಖಾಲಿ ಕೊಡ ಪ್ರದರ್ಶನ: ಸ್ಥಳೀಯ ಗ್ರಾಪಂ ಅಧಿಕಾರಿಗಳಿಗೆ ನೀರಿನ ಸಮಸ್ಯೆ ಬಗೆಹರಿಸುವಂತೆ ಎಷ್ಟೇ ಮನವಿ ಮಾಡಿದರೂ, ಇಲ್ಲಿಯ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಯುವಕರು, ಗ್ರಾಮಸ್ಥರು ಹಾಗೂ ಮಹಿಳೆಯರು ಕಂದನಕೋವಿ ಗ್ರಾಪಂಗೆ ಇಂದು ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

ಖಾಲಿ ಬಿಂದಿಗೆಗಳನ್ನು ಹಿಡಿದು ಗ್ರಾಪಂಗೆ ಧಾವಿಸಿದ ಮಹಿಳೆಯರು, ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಬೀಗ ಜಡಿದರು. ನಂತರ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟಿಸಿದರು. ತಕ್ಷಣ ಪಿಡಿಒ ಅವರನ್ನು ಗ್ರಾಪಂಗೆ ಕರೆಯಿಸಬೇಕೆಂದು ಆಗ್ರಹಿಸಿದರು. ಪಿಡಿಒ ಮಾತ್ರ ಗ್ರಾಪಂಗೆ ಬರಲೇ ಇಲ್ಲ. ‌ನೀರಿನ ಸಮಸ್ಯೆ ಬಗೆಹರಿಸುವಂತೆ ಪಿಡಿಒ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜ‌ನ ಆಗಿಲ್ಲ ಎಂದು ಪ್ರತಿಭಟನಾನಿರತರು ದೂರಿದರು.

ಗ್ರಾಮದ ಯುವಕರಿಗೆ ಹೆಣ್ಣು ಕೊಡಲು ಹಿಂದೇಟು:ಕಂದನಕೋವಿ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರಿದೆ.ಮಹಿಳೆಯರು, ಪುರುಷರು ಪರರ ತೋಟಗಳಲ್ಲಿನ ಕೊಳವೆ ಬಾವಿಗಳನ್ನು ಆಶ್ರಯಿಸಿದ್ದು, ಒಂದೆರಡು ಕಿ ಮೀ ದೂರು ಹೋಗಿ ನೀರು ಹೊತ್ತು ತರುತ್ತಿದ್ದಾರೆ. ಆರು ತಿಂಗಳಿಂದ ಗ್ರಾಮದಲ್ಲಿ ನೀರು ಪೂರೈಕೆ ಮಾಡುತ್ತಿಲ್ಲ. ಇಂದು ಖಾಲಿ ಕೊಡ ಪ್ರದರ್ಶಿಸಿ ಬೀಗ ಹಾಕಿ ಹೋರಾಟ ಮಾಡುತ್ತಿದ್ದೇವೆ

ಕಂದನಕೋವಿ ಗ್ರಾಮಕ್ಕೆ ನಮ್ಮ ಹೆಣ್ಣು ಮಕ್ಕಳನ್ನು ಕೊಟ್ಟರೆ ಅಲ್ಲಿ ನೀರನ್ನು ಹೊರಲು ಹಚ್ಚುತ್ತಾರೆ, ನಿಮ್ಮ ಆಸ್ತಿ ಅಡಕೆ ತೋಟ ಏನು ಬೇಡಪ್ಪ, ನಿಮ್ಮ ಗ್ರಾಮಕ್ಕೆ ಹೆಣ್ಣು ಕೊಟ್ಟ ತಕ್ಷಣ ನೀರನ್ನು ಹೊರಲಿಕ್ಕೆ ಹಚ್ಚುತ್ತೀರಿ ಅದಕ್ಕೆ ನಿಮ್ಮ ಗ್ರಾಮಕ್ಕೆ ಹೆಣ್ಣು ಕೊಡುವುದಿಲ್ಲ. ಹೀಗೆ ಬೇರೆ ಊರಿನವರು ಕಡ್ಡಿ ಮುರಿದಂಗ ಮಾತುಗಳನ್ನಾಡಿ ಹಂಗಿಸುತ್ತಾರೆ ಎಂದು ಗ್ರಾಮಸ್ಥ ಕೆಂಚವೀರಪ್ಪ ಆರೋಪಿಸಿದರು.

ಜನರ ಸಮಸ್ಯೆ ಆಲಿಸದ ಪಿಡಿಒ:ಕೆರೆಯಲ್ಲಿ ನೀರಿದೆ. ಆದ್ರೇ ಊರಿನ ಒಳಗೆ ನೀರನ್ನು ಹರಿಸುತ್ತಿಲ್ಲ. ನಾವು ಬೇರೆಯವರ ತೋಟದಿಂದ ನೀರು ಹೊರುವ ಪರಿಸ್ಥಿತಿ ನಿರ್ಮಾಣ ಆಗಿದೆ‌. ಕುಡಿಯಲು, ದನಗಳಿಗೆ, ಬಟ್ಟೆ ತೊಳೆಯಲು ನೀರಿನ ತತ್ವಾರ ಆಗಿದೆ. ಆರು ತಿಂಗಳಿಂದ ಇದೇ ರೀತಿ ಸಮಸ್ಯೆ ಆಗಿದೆ. ಪಿಡಿಒ ಹತ್ತಿರಕ್ಕೆ ಬಂದಿಲ್ಲ, ಕಾದು ಕಾದು ಕೂತಿದ್ದೇವೆ. ಆದ್ದರಿಂದ ಗ್ರಾಪಂಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದೇವೆ ಎಂದು ಗ್ರಾಮಸ್ಥೆ ರೂಪಾ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂಓದಿ:ಚಾಮರಾಜನಗರದಲ್ಲಿ ಅತಿಹೆಚ್ಚು ಗೋಶಾಲೆ ಆರಂಭ: 9 ಸಾವಿರ ಜಾನುವಾರುಗಳಿಗೆ ಆಶ್ರಯ - Drought management

ABOUT THE AUTHOR

...view details