ಬೆಂಗಳೂರು:ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅಂತಾರಾಷ್ಟ್ರೀಯ ನರರೋಗ ತಜ್ಞ ಡಾ.ಸುಶ್ರುತ್ ಗೌಡ ಅವರು ಕಾಂಗ್ರೆಸ್ ತೊರೆದು, ಬಿಜೆಪಿ ಸೇರ್ಪಡೆಯಾದರು. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಯಾವುದೇ ಷರತ್ತಿಲ್ಲದೆ, ಬಿಜೆಪಿ ಸೇರಿದ್ದೇನೆ. ಮೈಸೂರು ಅರಸು ಮನೆತನದ ಯದುವೀರ್ ಒಡೆಯರ್ ಗೆಲುವಿಗೆ ಶ್ರಮಿಸುವುದಾಗಿ ಅವರು ಪ್ರಕಟಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಚುನಾವಣಾ ಕಾರ್ಯಾಲಯ ರಿಜಾಯ್ಸ್ ಹೋಟೆಲ್ನಲ್ಲಿ ತಮ್ಮ ಬೆಂಬಲಿಗರೊಂದಿಗೆ ಡಾ.ಸುಶ್ರುತ್ ಗೌಡ ಬಿಜೆಪಿಗೆ ಸೇರಿದರು. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ಪಕ್ಷದ ಶಾಲು ಹೊದಿಸಿ, ಧ್ವಜ ನೀಡಿ ಸ್ವಾಗತ ಕೋರಿದರು. ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಧಾ ಮೋಹನ್ ದಾಸ್ ಅಗರ್ವಾಲ್, ಬಿಜೆಪಿ ವತಿಯಿಂದ ಡಾ. ಸುಶ್ರುತ್ ಗೌಡ ಅವರನ್ನು ಸ್ವಾಗತ ಮಾಡುತ್ತೇನೆ. ಅವರು ತುಂಬಾ ದಿನದಿಂದ ನಮ್ಮ ಸಂಪರ್ಕದಲ್ಲಿದ್ದರು. ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಕಾಂಗ್ರೆಸ್ ನಿಮ್ಮ ಆಲೋಚನೆಗೆ ಪೂರಕವಾಗಿಲ್ಲ ಅಂತ ಮನವರಿಕೆ ಮಾಡಿದೆವು. ಸಿದ್ಧಾಂತವನ್ನು ಒಪ್ಪಿ ಬಂದಿದ್ದಾರೆ ಎಂದು ಅಗರ್ವಾಲ್ ಹೇಳಿದರು.
ಸುಶ್ರುತ್ ಅವರು ಅಂತಾರಾಷ್ಟ್ರೀಯ ಮಟ್ಟದ ನ್ಯೂರಾಲಜಿ ವೈದ್ಯರಲ್ಲಿ ಒಬ್ಬರು. ನಾನು ಇವರ ಸಾಧನೆ ಬಗ್ಗೆ ನೋಡಿದ್ದೇನೆ. ಇಂತಹ ಕೀರ್ತಿವಂತರ ಸಾಧನೆ ದೊಡ್ಡದಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ, ಸಾಮಾನ್ಯ ಕಾರ್ಯಕರ್ತರ ರೀತಿ ಪಕ್ಷಕ್ಕೆ ಬಂದಿದ್ದಾರೆ. ಪಕ್ಷ ಸಂಘಟನೆಗೆ ಮುಂದೆ ಕೆಲಸ ಮಾಡಲಿದ್ದಾರೆ. ಅವರನ್ನು ಪಕ್ಷವು ಗೌರವಯುತವಾಗಿ ನಡೆಸಿಕೊಳ್ಳಲಿದೆ. ಅವರು ಮೈಸೂರು ಭಾಗದಲ್ಲಿ ಬಿಜೆಪಿ ಬಲಪಡಿಸುವ ವಿಶ್ವಾಸ ಇದೆ ಎಂದರು.