ಹಾವೇರಿ:ತಾಲೂಕು ಯಲಗಚ್ಚ ಗ್ರಾಮದಲ್ಲಿರುವ ದಿವಂಗತ ಡಾ. ಪುನೀತ್ ರಾಜಕುಮಾರ್ ದೇವಸ್ಥಾನ ಇದೀಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಉಡಚಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಜಾತ್ರೆಗೆ ಬರುವ ಭಕ್ತರು ಪುನೀತ್ ದೇವಸ್ಥಾನಕ್ಕೂ ಭೇಟಿ ನೀಡುತ್ತಿದ್ದಾರೆ.
ಮುಂಜಾನೆಯಿಂದ ತಡರಾತ್ರಿವರೆಗೂ ಪುನೀತ್ ದರ್ಶನ:ಮುಂಜಾನೆಯಿಂದ ತಡರಾತ್ರಿವರೆಗೆ ಅಭಿಮಾನಿಗಳು ತಂಡೋಪತಂಡವಾಗಿ ಆಗಮಿಸಿ ಪುನೀತ್ ರಾಜಕುಮಾರ್ ಪುತ್ಥಳಿಗೆ ನಮಿಸಿ, ಪುಷ್ಪಮಾಲೆಗಳನ್ನು ಹಾಕಿ ಪೂಜೆ ಸಲ್ಲಿಸುತ್ತಿದ್ದಾರೆ. ಕೆಲವರು ಹಣ್ಣು-ಕಾಯಿ ನೈವೇದ್ಯ ಅರ್ಪಿಸಿ ಎಡೆ ಹಿಡಿಯುತ್ತಿದ್ದಾರೆ. ತಮ್ಮ ಸ್ನೇಹಿತರ ಜೊತೆ, ಸಂಬಂಧಿಕರ ಜೊತೆ, ತಂಡೋಪತಂಡವಾಗಿ ಆಗಮಿಸುವ ಅಭಿಮಾನಿಗಳು ಪುತ್ಥಳಿ ಸುತ್ತ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಡಾ. ಪುನೀತ್ ರಾಜಕುಮಾರ್ ದೇವಸ್ಥಾನ ಇದೀಗ ಪ್ರವಾಸಿ ತಾಣ (ETV Bharat) ಸ್ವಂತ ಜಾಗದಲ್ಲಿ ಪುನೀತ್ ರಾಜಕುಮಾರ್ ದೇವಸ್ಥಾನ ನಿರ್ಮಿಸಿರುವ ಅಭಿಮಾನಿ:ಡಾ. ಪುನೀತ್ ರಾಜಕುಮಾರ್ ದೇವಸ್ಥಾನವನ್ನು ಯಲಗಚ್ಚ ಗ್ರಾಮದ ಪ್ರಕಾಶ್ ಮೊರಬದ ನಿರ್ಮಿಸಿದ್ದಾರೆ. ಪ್ರಕಾಶ್ ಮೊರಬದ ಡಾ. ಪುನೀತರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಪುನೀತ್ ರಾಜಕುಮಾರ್ ಅವರ ಜೊತೆ ನಟಿಸಬೇಕು ಎನ್ನುವ ಅವರ ಆಸೆ ಈಡೇರಲೇ ಇಲ್ಲಾ. ಇದರಿಂದ ತೀವ್ರವಾಗಿ ನೊಂದಿದ್ದ ಪ್ರಕಾಶ್ ತಮ್ಮ ಮನೆಯ ಆವರಣದಲ್ಲಿ ಸ್ವಂತ ಜಾಗದಲ್ಲಿ ಪುನೀತ್ ರಾಜಕುಮಾರ್ ದೇವಸ್ಥಾನ ಕಟ್ಟಿಸಲು ಮುಂದಾದರು.
ಹಲವು ತಿಂಗಳುಗಳ ನಂತರ ಪುನೀತ್ ರಾಜಕುಮಾರ್ ದೇವಸ್ಥಾನ ಸಿದ್ಧವಾಯಿತು. ದೇವಾಲಯದಲ್ಲಿ ಪುನೀತ್ ಅವರ ಪುತ್ಥಳಿಯನ್ನು ಪುನೀತ್ ಪತ್ನಿ ಕಳೆದ ಮೂರು ತಿಂಗಳ ಹಿಂದೆ ಉದ್ಘಾಟಿಸಿದ್ದರು. ನಂತರ ಅಭಿಮಾನಿಗಳಿಗೆ ತೆರೆಯಲಾಗಿದ್ದ ದೇವಸ್ಥಾನಕ್ಕೆ ದಿನನಿತ್ಯ ಅಭಿಮಾನಿಗಳು ಆಗಮಿಸಿ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ವಿಶೇಷ ದಿನಗಳಲ್ಲಿ ಝಗಮಗಿಸುವ ಪುನೀತ್ ಆಲಯ:ಪ್ರತಿನಿತ್ಯ ಪುತ್ಥಳಿಗೆ ಸಾಮಾನ್ಯವಾಗಿ ಪೂಜೆ ಸಲ್ಲಿಸುವ ಪ್ರಕಾಶ್ ಅಮಾವಾಸ್ಯೆ ಮತ್ತು ವಿಶೇಷ ದಿನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಗ್ರಾಮದಲ್ಲಿ ಉಡಚಮ್ಮ ದೇವಿ ಜಾತ್ರೆ ನಡೆಯುತ್ತಿರುವ ಕಾರಣ ಏಳು ದಿನಗಳ ಕಾಲ ಪ್ರಕಾಶ್ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಿದ್ದಾರೆ.
ಅಪ್ಪು ಪುತ್ಥಳಿಗೆ ತೆಂಗಿನಕಾಯಿ ಬಾಳೆಹಣ್ಣು ನೈವಿದ್ಯ ಹಿಡಿಯುವ ಪ್ರಕಾಶ್, ಕರ್ಪೂರ ಬೆಳಗಿ ಸಾಂಬ್ರಾಣಿ ಹಾಕಿ ಪೂಜೆ ಸಲ್ಲಿಸುತ್ತಾರೆ. ಇವರ ಕಾರ್ಯಕ್ಕೆ ತಾಯಿ ಮತ್ತು ಪತ್ನಿ ಸಾಥ್ ನೀಡುತ್ತಾರೆ. ಪುನೀತ್ ರಾಜಕುಮಾರ್ ಅಪರೂಪದ ಭಾವಚಿತ್ರಗಳು ಅವರು ನಟಿಸಿದ ಸಿನಿಮಾದ ಹೆಸರುಗಳನ್ನು ದೇವಸ್ಥಾನದಲ್ಲಿ ಹಾಕಲಾಗಿದೆ. ಅಭಿಮಾನಿಗಳು ತಂಡೋಪತಂಡವಾಗಿ ಬಂದು ಅಪ್ಪು ಮೂರ್ತಿಯನ್ನು ಕಣ್ತುಂಬಿಕೊಳ್ಳುತ್ತಿರುವುದು ಪ್ರಕಾಶ್ ಮತ್ತು ಅವರ ಕುಟುಂಬದ ಸದಸ್ಯರಿಗೆ ಸಂತಸ ತಂದಿದೆ.
ಇದನ್ನೂ ಓದಿ:ಹಾವೇರಿಯ ಅಭಿಮಾನಿ ಕಟ್ಟಿದ ಪುನೀತ್ ದೇಗುಲದಲ್ಲಿ ವಿಶೇಷ ಪೂಜೆ; ಗ್ರಾಮಸ್ಥರಿಂದ ನಮನ