ಮೈಸೂರು: ಮಾನವ ಹಾಗೂ ಆನೆ ಸಂಘರ್ಷಕ್ಕೆ ಕಾರಣವೇನು? ಆನೆಗಳ ಜೀವನ ಶೈಲಿ ಹೇಗಿರುತ್ತದೆ?. ಭಾರತದಲ್ಲಿ ಆನೆಗಳ ದಾಳಿಗೆ ಒಂದು ವರ್ಷಕ್ಕೆ ಎಷ್ಟು ಜನ ಸಾವನ್ನಪ್ಪುತ್ತಾರೆ ಹಾಗೂ ವಿಶ್ವದಲ್ಲಿ ಅತಿ ಹೆಚ್ಚು ಆನೆಗಳಿರುವ ದೇಶ ಯಾವುದು? ಆ ಮಾನವ ಮತ್ತು ಆನೆ ಸಂರ್ಘಷಕ್ಕೆ ಆನೆ ಕಾರಿಡಾರ್ ಯೋಜನೆಯಿಂದ ಪರಿಹಾರ ಹೇಗಾಗುತ್ತದೆ? ಎಂಬ ಬಗ್ಗೆ 'ಈಟಿವಿ ಭಾರತ್' ಜೊತೆ ಆನೆಗಳ ವಿಚಾರದಲ್ಲಿ ಸಂಶೋಧನೆ ಮಾಡಿರುವ ಡಾ.ಮೆಕಾಲೆ ಕಾರ್ಗೆ ಮಾತನಾಡಿದ್ದಾರೆ.
ಆಗಸ್ಟ್ 12 ವಿಶ್ವ ಆನೆ ದಿನ. 1986ರಲ್ಲಿ ಆನೆಯನ್ನು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿಸಲಾಯಿತು. 1991-92ರಲ್ಲಿ ಎಲಿಫೆಂಟ್ ಪ್ರಾಜೆಕ್ಟ್ ಕೈಗೊಳ್ಳಲಾಗಿದ್ದು, ಆ ನಂತರ ಪ್ರತೀ ವರ್ಷ ಆಗಸ್ಟ್ 12ರಂದು ವಿಶ್ವ ಆನೆ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಸಮೀಕ್ಷೆಯ ಪ್ರಕಾರ, ರಾಜ್ಯದಲ್ಲಿ ಅಂದಾಜು 6 ಸಾವಿರಕ್ಕೂ ಹೆಚ್ಚು ಆನೆಗಳಿವೆ. ಪ್ರತಿನಿತ್ಯ ಆನೆಗಳು ಕಾಡಿನಲ್ಲಿ 125 ಕಿಲೋ ಮೀಟರ್ ಓಡಾಡಬಲ್ಲವು. ಸಾಮಾನ್ಯವಾಗಿ 50ಕ್ಕೂ ಹೆಚ್ಚು ಹೆಣ್ಣಾನೆಗಳು ಗುಂಪು ಗುಂಪಾಗಿ ವಾಸ ಮಾಡುತ್ತವೆ. ಒಂದು ಆನೆ ಪ್ರತಿನಿತ್ಯ 125 ಲೀಟರ್ ನೀರು ಕುಡಿಯುತ್ತದೆ. 150ಕ್ಕೂ ಹೆಚ್ಚು ಕೆ.ಜಿ ಆಹಾರ ತಿನ್ನುತ್ತದೆ. ಆನೆ ದೊಡ್ಡ ಪ್ರಾಣಿ. ದೊಡ್ಡ ಬ್ರೈನ್. ಆದರೆ ಜೀರ್ಣಶಕ್ತಿ ತುಂಬಾ ಕಡಿಮೆ. ಆದ್ದರಿಂದ ಅದು ಹಾಕುವ ಗೊಬ್ಬರದಲ್ಲಿ ತಾನು ತಿಂದ ಆಹಾರದ ಬೀಜಗಳು ಕಾಡಿನಲ್ಲಿ ಬಿದ್ದು, ಹಲವು ಕಡೆ ಕಾಡಿನ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ಮೆಕಾಲೆ ವಿವರಿಸಿದರು.
ಆನೆ ಗುಂಪು ಗುಂಪಾಗಿ ಜೀವಿಸುತ್ತವೆ. ಮುಖ್ಯವಾಗಿ ತಾಯಿ ಆನೆ ಮರಿಯಾನೆಗಳಿಗೆ ಎಲ್ಲಾ ವಿಚಾರಗಳನ್ನು ಕಲಿಸುತ್ತದೆ. ಆನೆಗಳು ಗುಂಪಿನಲ್ಲಿ ವಾಸಿಸುವುದರಿಂದ ಇತ್ತೀಚೆಗೆ ಮಾನವ ಮತ್ತು ಆನೆಗಳ ಸಂಘರ್ಷಗಳು ಏರ್ಪಡುತ್ತಿವೆ. ಮುಖ್ಯವಾಗಿ ನಾಗರೀಕತೆ, ನಗರೀಕರಣ, ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಭೂಮಿ ಒತ್ತುವರಿ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಕೆಲವು ಜನರು ಅರಣ್ಯ ಭೂಮಿ ಪಕ್ಕದಲ್ಲೇ ಆರ್ಥಿಕ ಬೆಳೆ ಬೆಳೆಯುತ್ತಿದ್ದಾರೆ. ಹೀಗಾಗಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಆನೆಗಳು ಬಂದಾಗ ಸಂಘರ್ಷಗಳು ನಡೆಯುತ್ತವೆ ಎಂದಿದ್ದಾರೆ.