ಬೆಂಗಳೂರು: ''ಮೃದು ಸ್ವಭಾವ ನನ್ನ ದೌರ್ಬಲ್ಯವಲ್ಲ, ರಾಜಕೀಯ ಪ್ರವೇಶಿಸಿದರೂ ನಾನು ರಾಜಕಾರಣ ಮಾಡಲ್ಲ. ನನ್ನ ಸ್ಪರ್ಧೆಯಿಂದ ಬಿಜೆಪಿ ಮತ್ತು ಜೆಡಿಎಸ್ ಹೃದಯಗಳು ಬೆಸೆದಿವೆ. ಕನಕಪುರ ಬಂಡೆ ವಿರುದ್ಧ ನನ್ನ ಜಯ ನಿಶ್ಚಿತ. ಜನಶಕ್ತಿ ಮುಂದೆ ಡಿ. ಕೆ ಸಹೋದರರ ಯಾವ ಚುನಾವಣೆ ತಂತ್ರಗಾರಿಕೆಗಳೂ ನಡೆಯುವುದಿಲ್ಲ''.. ಇವು ದೇಶದ ಗಮನ ಸೆಳೆದಿರುವ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಪ್ರಧಾನಿ ದೇವೇಗೌಡರ ಅಳಿಯರಾದ ಖ್ಯಾತ ಹೃದಯರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರ ಆತ್ಮವಿಶ್ವಾಸ ಹಾಗೂ ಅಂತರಾಳದ ಮಾತುಗಳು.
ಲೋಕಸಭೆ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸ್ಪರ್ಧೆ ಮಾಡಿರುವ ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಮಂಜುನಾಥ್, ಚುನಾವಣೆ ಅಖಾಡಕ್ಕಿಳಿದಿರುವ ಕುರಿತು ಹಾಗೂ ಪ್ರಚಾರದ ಬಗ್ಗೆ 'ಈಟಿವಿ ಭಾರತ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂದರ್ಶನದ ಪ್ರಶ್ನೋತ್ತರಗಳು ಈ ಕೆಳಗಿನಂತಿವೆ.
ಪ್ರಶ್ನೆ:ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಹೇಗೆನಿಸುತ್ತಿದೆ. ಘಟಾನುಘಟಿ ಅಭ್ಯರ್ಥಿಯ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೀರಾ?
ಉತ್ತರ:ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ, ರಾಜಕೀಯಕ್ಕೆ ಬಂದಿರೋದು ನಿಜವಾಗಿಯೂ ರಾಜಕೀಯ ಮಾಡಲು ಅಲ್ಲ. ಇದನ್ನು ಎಲ್ಲಿ ಬೇಕಾದರೂ ಹೇಳುತ್ತೇನೆ. ನಾನು ಸೇವೆ ಮಾಡುವ ಉದ್ದೇಶದಿಂದಲೇ ರಾಜಕೀಯಕ್ಕೆ ಬಂದಿರುವುದು, ಜಯದೇವ ಆಸ್ಪತ್ರೆಯಲ್ಲಿ ರೋಗಿಗಳ ಸೇವೆ ಮಾಡಿದಂತೆ ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರ ಸೇವೆ ಮಾಡಬಹುದು ಅಂತ ಬಹಳ ಜನರು ನನ್ನ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದ್ದಾರೆ. ಚುನಾವಣೆ ಅಂದರೆ ಅದು ಸ್ಪರ್ಧೆಯೇ, ಅದರಲ್ಲಿ ಎರಡನೇ ಮಾತಿಲ್ಲ. ಅದನ್ನು ನಾನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ನಾನು ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದೇನೆ. ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಕಾರ್ಯಕರ್ತರ ಹೃದಯಗಳು ಒಂದಾಗಿವೆ. ಎಲ್ಲರೂ ತುಂಬಾ ಉತ್ಸುಕರಾಗಿದ್ದಾರೆ. ನನ್ನ ಸ್ಪರ್ಧೆಯಿಂದ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಹುಮ್ಮಸ್ಸು ಬಂದಿದೆ. ಚುನಾವಣೆ ಗೆಲುವಿನ ಬಗ್ಗೆ ನಾನೂ ಸಹ ಸಕಾರಾತ್ಮಕವಾಗಿದ್ದೇನೆ.
ಪ್ರಶ್ನೆ:ಮಾಜಿ ಪ್ರಧಾನಿ ದೇವೇಗೌಡರ ಅಳಿಯರಾಗಿ ನಿಮ್ಮದೇ ಆದ ಜೆಡಿಎಸ್ ಪಕ್ಷ ಇರುವಾಗ, ಬಿಜೆಪಿಯಿಂದ ಸ್ಪರ್ಧೆ ಯಾಕೆ?
ಉತ್ತರ:ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಚುನಾವಣಾ ಮೈತ್ರಿ ಮಾಡಿಕೊಂಡಿವೆ. ನನ್ನ ಸ್ಪರ್ಧೆಯ ಪಕ್ಷ ಮತ್ತು ಚಿಹ್ನೆಯನ್ನು ಪಕ್ಷದ ವರಿಷ್ಠರು ನಿರ್ಧಾರ ಮಾಡಿದ್ದಾರೆ. ಕ್ಷೇತ್ರ ಮತ್ತು ಚಿಹ್ನೆಯು ವರಿಷ್ಠರ ತೀರ್ಮಾನ, ಇದರಲ್ಲಿ ನನ್ನ ಆಯ್ಕೆ ಇರಲಿಲ್ಲ. ಎರಡೂ ಪಕ್ಷಗಳ ಮುಖಂಡರು ಯಾವ ರೀತಿ ಲೆಕ್ಕಾಚಾರ ಮಾಡಿಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಇದೊಂದು ತರಹ ಸಿಂಬಾಲಿಕ್ ಎಕ್ಸ್ಚೇಂಜ್ ಇದ್ದ ಹಾಗೆ.
ಪ್ರಶ್ನೆ:ನಿಮ್ಮ ಸೇವೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ಗಮನ ಸೆಳೆದಿದ್ದು ಹೇಗೆ?
ಉತ್ತರ:ಅವರಿಗೆ ನನ್ನ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ನಾನು ಮಾಡಿರುವ ಸುಧಾರಣೆ, ನನ್ನ ಸೇವೆ, ಸಾಧನೆ, ನಮ್ಮ ಮನೋಭಾವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ತಜ್ಞರು, ಸಾಧಕರು, ಪರಿಣತರಿಗೆ ಹೆಚ್ಚು ಮಹತ್ವ ಕೊಟ್ಟಿದೆ. ಆ ಹಿನ್ನೆಲೆಯಲ್ಲಿ ನನ್ನ ಆಯ್ಕೆ ಮಾಡಿದ್ದಾರೆ.
ಪ್ರಶ್ನೆ:ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ?
ಉತ್ತರ:ಕ್ಷೇತ್ರವನ್ನು ನಾನೇನು ಕೇಳಿಕೊಂಡು ಹೋಗಿರಲಿಲ್ಲ. ಅವರಾಗಿಯೇ ಕ್ಷೇತ್ರ ಆಯ್ಕೆ ಮಾಡಿದ್ದಾರೆ.
ಪ್ರಶ್ನೆ: ಒಬ್ಬ ಪ್ರಬಲ ಅಭ್ಯರ್ಥಿ ವಿರುದ್ಧ ಮತ್ತೊಬ್ಬ ಪ್ರಬಲ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆಯೇ?
ಉತ್ತರ:ಬಹುಶಃ ಇರಬಹುದು ಅಂತ ಅನಿಸುತ್ತಿದೆ.
ಪ್ರಶ್ನೆ:ಚುನಾವಣೆ ಪ್ರಚಾರ ಹೇಗೆ ನಡೆಯುತ್ತಿದೆ?
ಉತ್ತರ:ತುಂಬಾ ಚೆನ್ನಾಗಿ ನಡೆಯುತ್ತಿದೆ. 8 ಕ್ಷೇತ್ರಗಳಲ್ಲೂ ಪ್ರಚಾರ ನಡೆಸುತ್ತಿದ್ದೇನೆ. ಪ್ರಾಥಮಿಕ ಹಂತದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಭೆ ಜಂಟಿಯಾಗಿ ನಡೆಯುತ್ತಿದೆ. ಕಾರ್ಯಕರ್ತರು ಮತ್ತು ಮತದಾರರನ್ನು ಭೇಟಿ ಮಾಡಿದಾಗ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇದರಿಂದ ನನ್ನ ಆತ್ಮವಿಶ್ವಾಸ ಸಹ ದಿನೇ ದಿನೇ ಜಾಸ್ತಿಯಾಗುತ್ತಿದೆ.
ಪ್ರಶ್ನೆ:ಕ್ಷೇತ್ರದಲ್ಲಿ ಬಿಜೆಪಿ - ಜೆಡಿಎಸ್ ನಡುವೆ ಗೊಂದಲ ಇಲ್ಲವೇ?
ಉತ್ತರ:ಎರಡೂ ಪಕ್ಷಗಳ ನಡುವೆ ಯಾವುದೇ ಗೊಂದಲಗಳಿಲ್ಲ. ಈ ಸಾರಿ ಅಣ್ಣ-ತಮ್ಮಂದಿರ ತರಹ ಕೆಲಸ ಮಾಡೋಣ ಅಂತ ಅವರವರೇ ಮಾತಾಡಿಕೊಳ್ಳುತ್ತಿದ್ದಾರೆ. ಹಿಂದೆ ಇದ್ದ ವೈಮನಸ್ಸು, ಈಗೆಲ್ಲಾ ಹೋಗಿಬಿಟ್ಟಿದೆ.