ಬೆಂಗಳೂರು:ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ ಅವ್ಯವಹಾರ ಹಗರಣವನ್ನು ಮುಚ್ಚಿ ಹಾಕಲು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಲು ರಾಹುಲ್ ಗಾಂಧಿಯವರು ಬಂದಿದ್ದಾರಾ? ಅಥವಾ ಮುಖ್ಯಮಂತ್ರಿಯವರ ರಾಜೀನಾಮೆ ಪಡೆಯಲು ಸಭೆ ಕರೆದಿದ್ದಾರಾ? ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ನಾರಾಯಣ್ ಟೀಕಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ದಲಿತರ ಹಣವನ್ನು ಲೂಟಿ ಹೊಡೆದ ಸರ್ಕಾರವಿದು. ನೀವು ಈ ಸರ್ಕಾರದ ರಾಜೀನಾಮೆ ಪಡೆಯಲು ಬಂದಿದ್ದೀರಾ? ಎಂದು ಕೇಳಿದರು. ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ರಾಜೀನಾಮೆಯೇ? ಪಕ್ಷದಿಂದ ಉಚ್ಚಾಟಿಸುವಿರಾ? ಅವರನ್ನು ಬಂಧಿಸುವಿರಾ? ಸಾಕ್ಷಿ ನಾಶ ಮಾಡುವ ಬಗ್ಗೆ ಮಹತ್ವದ ಸಭೆ ನಡೆಸಿದ್ದ ಸಚಿವ ಶರಣಪ್ರಕಾಶ್ ಪಾಟೀಲರನ್ನು ಬಂಧಿಸುವಿರಾ? ಅವರ ಉಚ್ಚಾಟನೆ ಮಾಡುವಿರಾ ಎಂದು ಸರಣಿ ಪ್ರಶ್ನೆಗಳನ್ನು ಮುಂದಿಟ್ಟರು.
ಹಗರಣ ದೊಡ್ಡ ಜಾಲ ಇದ್ದಂತಿದೆ. ಎಲ್ಲರೂ ಅನುಕೂಲ ಪಡೆದುಕೊಂಡಂತೆ ಕಾಣುತ್ತಿದೆ. ಹಾಗಾಗಿ ಎಲ್ಲ ಸಂದೇಹಗಳಿಗೆ ಉತ್ತರ ಕೊಟ್ಟು ಕ್ರಮ ವಹಿಸಬೇಕಿದೆ. ಕರ್ಮಕಾಂಡ ಮಾಡಿ ಭಂಡತನದಲ್ಲಿ ಏನೂ ಉತ್ತರ ಕೊಡದೆ ನಾಗೇಂದ್ರ ಅವರ ರಾಜೀನಾಮೆಯನ್ನು ಅತ್ಯಂತ ಕಷ್ಟಪಟ್ಟು ಪಡೆದಿದ್ದಾರೆ ಎಂದು ಹೇಕಿದರು.