'ಅರ್ಕಾವತಿ ನದಿ ಪಾತ್ರದ ಕೆರೆಗಳು ವಿಷಯುಕ್ತ' ದೊಡ್ಡಬಳ್ಳಾಪುರ: ಅರ್ಕಾವತಿ ನದಿ ಪಾತ್ರದ ಕೆರೆಗಳು ವಿಷಯುಕ್ತವಾಗಿದೆ. ಇದಕ್ಕೆ ಪ್ರಮುಖ ಕಾರಣ ಬಾಶೆಟ್ಟಿಹಳ್ಳಿ ಕೈಗಾರಿಕೆಗಳ ತ್ಯಾಜ್ಯ ನೀರು. ಈ ಕಲುಷಿತ ನೀರು ಸೇವನೆಯಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆ ಏರುತ್ತಿದೆ. ನಾವು ಎಚ್ಚೆತ್ತುಕೊಳ್ಳದಿದ್ದಾರೆ ನಮ್ಮ ಮುಂದಿನ ಪೀಳಿಗೆಯವರು ಸಂಕಷ್ಟಕ್ಕೆ ತುತ್ತಾಗುತ್ತಾರೆ ಎಂದು ಡಾ.ಆಂಜಿನಪ್ಪ ಎಚ್ಚರಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹರಿಯುವ ಅರ್ಕಾವತಿ ನದಿ ವಿಷವಾಗುತ್ತಿದೆ. ನದಿಪಾತ್ರದ ಕೆರೆಗಳನ್ನು ರಕ್ಷಿಸಲು ಕಳೆದ 10 ವರ್ಷಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಅರ್ಕಾವತಿ ನದಿ ಹೋರಾಟ ಸಮಿತಿಯಿಂದ ನಡೆಯುವ ಈ ಹೋರಾಟಕ್ಕೆ ಸ್ಥಳೀಯರೇ ಆಗಿರುವ ಖ್ಯಾತ ವೈದ್ಯ ಡಾ.ಆಂಜಿನಪ್ಪ ಬೆಂಬಲ ನೀಡಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಆಂಜಿನಪ್ಪ ಸಮ್ಮೇಳನದಲ್ಲೂ ನದಿ ಹೋರಾಟದ ಬಗ್ಗೆಯೇ ಮಾತನಾಡುವುದ್ದಾಗಿ ಹೇಳಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಜರಾಹೊಸಹಳ್ಳಿ ಮತ್ತು ದೊಡ್ಡತುಮಕೂರು ಪಂಚಾಯಿತಿಗೆ ಸೇರಿದ ಮುಖಂಡರೊಂದಿಗೆ ಅವರು ಮಾತುಕತೆ ನಡೆಸಿದ್ದಾರೆ.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಅರ್ಕಾವತಿ ನದಿ ಪಾತ್ರದ ಕೆರೆಗಳು ವಿಷಯುಕ್ತವಾಗಿದೆ. ಇದಕ್ಕೆ ಪ್ರಮುಖ ಕಾರಣ ಬಾಶೆಟ್ಟಿಹಳ್ಳಿ ಕೈಗಾರಿಕೆಗಳ ತ್ಯಾಜ್ಯ ನೀರು. ಕಲುಷಿತ ನೀರಿನಲ್ಲಿ ಕಣ್ಣಿಗೆ ಕಾಣಿಸದ ಕಾರ್ಸಿನೋಜೇನ್ಗಳಿವೆ. ಇವು ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿದೆ. ಹೊಟ್ಟೆ ಕ್ಯಾನ್ಸರ್, ಫ್ರಾಂಕ್ರಿಯಸ್ ಕ್ಯಾನ್ಸರ್ ಮತ್ತು ಮೂಳೆ ಕ್ಯಾನ್ಸರ್‌ಗಳಿಗೆ ಜನರು ತುತ್ತಾಗುತ್ತಿದ್ದಾರೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಮುಂದಿನ ಪೀಳಿಗೆಯ ಜನ ಸಂಕಷ್ಟಕ್ಕೆ ತುತ್ತಾಗುತ್ತಾರೆ. ನಾನು ವೈದ್ಯ ಹೌದು. ಅದರ ಜೊತೆ ಸಾಮಾಜಿಕ ಹೋರಾಟಗಾರ. ಕನ್ನಡ ಮಾಧ್ಯಮದಲ್ಲಿ ಓದಿರುವುದರಿಂದ ಚೆನ್ನಾಗಿ ಮಾತನಾಡಬಲ್ಲೆ. ನನ್ನ ಮಾತಿಗೆ ಜನರೂ ಸಹ ಗೌರವ ಕೊಡುತ್ತಾರೆ" ಎಂದರು.
ಇದನ್ನೂ ಓದಿ:ಶಿವಮೊಗ್ಗ: ಮುಂದುವರಿದ ಪಂಚಮಸಾಲಿ ಮೀಸಲಾತಿ ಹೋರಾಟ, ಯತ್ನಾಳ್ ಭಾಗಿ