ಕರ್ನಾಟಕ

karnataka

ETV Bharat / state

ದೇವರ ಹೆಸರಿನಲ್ಲಿ ಹಾಲಿನ ವ್ಯರ್ಥ ಬೇಡ, ಅಗತ್ಯವಿದ್ದವರಿಗೆ ನೀಡಿ: ಜಯಮೃತ್ಯುಂಜಯ ಸ್ವಾಮೀಜಿ - Jaya Mruthyunjaya Swamiji

ನಾಗರ ಪಂಚಮಿ ಹಬ್ಬದಂದು ಕಲ್ಲು ನಾಗರಕ್ಕೆ ಹಾಲೆರೆಯುವುದು ಮಾಮೂಲು. ಇದನ್ನು ತಡೆಯಲು ಜಯಮೃತ್ಯುಂಜಯ ಸ್ವಾಮೀಜಿ ವಿನೂತನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.

ಜಯಮೃತ್ಯುಂಜಯ ಸ್ವಾಮೀಜಿ
ಜಯಮೃತ್ಯುಂಜಯ ಸ್ವಾಮೀಜಿ (ETV Bharat)

By ETV Bharat Karnataka Team

Published : Aug 7, 2024, 9:34 PM IST

Updated : Aug 7, 2024, 10:29 PM IST

ಜಯಮೃತ್ಯುಂಜಯ ಸ್ವಾಮೀಜಿ (ETV Bharat)

ದಾವಣಗೆರೆ: ನಾಗರ ಪಂಚಮಿ ಹಬ್ಬದಂದು ನಾಗರ ಕಲ್ಲಿಗೆ ಮತ್ತು ಹುತ್ತಕ್ಕೆ ಹಾಲನ್ನು ಎರೆಯುವುದು ವಾಡಿಕೆ. ಇದನ್ನು ತಡೆಯಲು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕಳೆದ ಹಲವು ವರ್ಷಗಳಿಂದ ವಿನೂತನ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಕಲ್ಲು ನಾಗರಕ್ಕೆ ಹಾಕುವ ಹಾಲು, ಬಡ ಮಕ್ಕಳ ಪಾಲು ಎಂಬ ಸಪ್ತಾಹವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದಾರೆ. ಇಂದು ಕೂಡ ಸ್ವಾಮೀಜಿ ದಾವಣಗೆರೆಯ ಬಿಜೆಎಂ ಖಾಸಗಿ ಶಾಲೆ ಭೇಟಿ ನೀಡಿ ಮಕ್ಕಳಿಗೆ ಹಾಲು ಹಾಗೂ ಬ್ರೆಡ್ ವಿತರಿಸಿದರು. ಬಳಿಕ ನಾಗರ ಪಂಚಮಿ ಹೆಸರಿನಲ್ಲಿ ಕಲ್ಲು ನಾಗರಕ್ಕೆ ಹಾಲು ಹಾಕುವುದು ತಪ್ಪು. ಇದೊಂದು ಮೂಢನಂಬಿಕೆ ಎಂದರು.

ಬಳಿಕ ಮಾತನಾಡಿದ ಅವರು, ಕಳೆದ 26 ವರ್ಷಗಳಿಂದ ನಾಗರ ಪಂಚಮಿ ಪ್ರಯುಕ್ತ ಕಲ್ಲು ನಾಗರಕ್ಕೆ ಹಾಕುವ ಹಾಲನ್ನು ದೇವರಿಗೆ ನೈವೇದ್ಯವಾಗಿಟ್ಟು ಬಳಿಕ ಮಕ್ಕಳಿಗೆ ನೀಡಬೇಕು. ಈ ಮೂಲಕ ಗೋಮಾತೆಯಿಂದ ಬಂದ ಪವಿತ್ರವಾದ ಹಾಲಿನ ವ್ಯರ್ಥ ತಡೆಯಬೇಕು. ಪೌಷ್ಟಿಕಾಂಶ ಭರಿತ ಹಾಲನ್ನು ದೇವರ ಹೆಸರಿನಲ್ಲಿ ವ್ಯರ್ಥ ಮಾಡುವುದು ಬೇಡ. ಅಪೌಷ್ಟಿಕತೆಯಿಂದ ಬಳಲುತ್ತಿರುವವರು ಮತ್ತು ಅಗತ್ಯವಿದ್ದರಿಗೆ ನೀಡಿ ನಾಗರ ಪಂಚಮಿ ಹಬ್ಬವನ್ನು ಸಾರ್ಥಕಗೊಳಿಸಬೇಕು ಎಂದು ಕರೆ ನೀಡಿದರು.

ನಾಗರ ಪಂಚಮಿಯನ್ನು ಮಕ್ಕಳ ಪಂಚಮಿಯನ್ನಾಗಿ ಆಚರಣೆ ಮಾಡಿದರೆ ಎಲ್ಲರೂ ಒಂದೇ ತಾಯಿ ಮಕ್ಕಳು ಎಂಬ ಭಾವನೆ ಮೂಡಿಸಬಹುದು. ಇದಕ್ಕಾಗಿ ಮಕ್ಕಳ ಪಂಚಮಿ ಆಚರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಹಬ್ಬಗಳಿಗೆ ಸಾಂಸ್ಕೃತಿ ಸ್ವರೂಪ ಇರಬೇಕೇ ಹೊರತು, ಬಡವರಿಗೆ ಹೊರೆಯಾಗುವಂತಿರಬಾರದು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಾಲು ಕುಡಿಯುವ ಸಪ್ತಾಹ ಮಾಡಲಾಗುತ್ತಿದೆ. ಇದಕ್ಕೆ ನಿನ್ನೆ ಬೆಂಗಳೂರಿನಲ್ಲಿ ಚಾಲನೆ ಕೊಟ್ಟಿದ್ದೇನೆ. ಇಂದು ದಾವಣಗೆರೆಯಲ್ಲಿ ಚಾಲನೆ ಕೊಟ್ಟಿದ್ದೇನೆ. ಹೀಗೆ ಧಾರವಾಡ, ವಿಜಯಪುರ, ಬಾಗಲಕೋಟೆ ಸೇರಿದಂತೆ ಹಲವೆಡೆ 7 ದಿನಗಳ ಕಾಲ ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ ಎಂದರು.

ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಲಿಂಗಾಯತರ ಕೊಡುಗೆ ಇದೆ: ಜಯಮೃತ್ಯುಂಜಯ ಸ್ವಾಮೀಜಿ - 2A Reservation

Last Updated : Aug 7, 2024, 10:29 PM IST

ABOUT THE AUTHOR

...view details