ದಾವಣಗೆರೆ:''ಬಿಜೆಪಿ ವಿರುದ್ಧ ಕಾಂಗ್ರೆಸ್ ಚೊಂಬು ಅಭಿಯಾನ ಹಮ್ಮಿಕೊಂಡಿದ್ದೇವೆ. ಮೋದಿ ರಾಜ್ಯಕ್ಕೆ ಬರ ಪರಿಹಾರ ಕೊಡುವ ಬದಲು ಕೊಟ್ಟಿದ್ದು ಚೊಂಬು ಮಾತ್ರ. ಚೊಂಬು ನೀಡಿದ ಮೋದಿ ಅವರು ಯಾವ ಮುಖ ಇಟ್ಟುಕೊಂಡು ದಾವಣಗೆರೆಗೆ ಬರಲಿದ್ದಾರೆ. ಮೋದಿ ಅವರನ್ನು ನೋಡಬೇಡಿ ಸ್ಥಳೀಯ ಅಭ್ಯರ್ಥಿ ಡಾ.ಪ್ರಭಾ ಅವರನ್ನು ಗೆಲ್ಲಿಸಿ'' ಎಂದು ಎಐಸಿಸಿ ಕಾರ್ಯಾಧ್ಯಕ್ಷ ಮಯೂರ್ ಕುಮಾರ್ ವರ್ಮಾ ಹೇಳಿದರು.
ಚೊಂಬು ಪ್ರತಿಭಟನೆ ನಡೆಸಿದ ಬಳಿಕ ಮಾತನಾಡಿದ ಅವರು, ''ಹತ್ತು ವರ್ಷಗಳಲ್ಲಿ ಜನರ ಅವಶ್ಯಕತೆ ಈಡೇರಿಸಲು ಮೋದಿ ಸರ್ಕಾರ ವಿಫಲವಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನ ಅಕೌಂಟ್ಗೆ 15 ಲಕ್ಷ ಹಾಕುತ್ತೇವೆ. 2014ರಲ್ಲಿ ಕಪ್ಪು ಹಣವನ್ನು ತರುತ್ತೇವೆ. ದೇಶದ ಯುವಕರಿಗೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದರು. ದೇಶದಲ್ಲಿ ಆರ್ಥಿಕತೆ ಕುಸಿತವಾಗಿದೆ, ಜಿಡಿಪಿ ಪಾತಾಳಕ್ಕೆ ಸೇರಿದೆ. ನಿರುದ್ಯೋಗ ಹೆಚ್ಚಳ, ಶೇ 40ರಷ್ಟು ಪರ್ಸೆಂಟ್ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಭಿಯಾನ ಮಾಡಿತ್ತು. ಇಂದು ಕೇಂದ್ರ ಬಿಜೆಪಿ ಸರ್ಕಾರ ಜನರಿಗೆ ಖಾಲಿ ಚೊಂಬು ನೀಡಿದೆ'' ಎಂದು ಕಿಡಿಕಾರಿದರು.
''ಮೋದಿ ಯಾವ ಮುಖ ಇಟ್ಟುಕೊಂಡು ಇಲ್ಲಿಗೆ ಬರುತ್ತಿದ್ದಾರೆ. ಅವರು ಯಾವ ಅಧಾರದ ಮೇಲೆ ಮತ ಕೇಳುತ್ತಿದ್ದಾರೆ ಗೊತ್ತಿಲ್ಲ. ಮೋದಿ ಅವರು ಹತ್ತು ವರ್ಷದ ಆಳ್ವಿಕೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಬಡವ ಬಡವನಾಗುತ್ತಿದ್ದಾನೆ. ಶ್ರೀಮಂತರಲ್ಲಿ ಶ್ರೀಮಂತರಾಗುತ್ತಿದ್ದಾರೆ. ಪುನಃ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ, ಜನರ ರಕ್ಷಣೆ ಮಾಡುತ್ತೆ. ದೇಶದಲ್ಲಿ ಸರ್ಕಾರ ರಚಿಸಲು ಬೇಕಾಗುವ ಬಹುಮತದಷ್ಟು ಸ್ಥಾನಗಳನ್ನು ಗೆಲ್ಲುತ್ತೇವೆ'' ಎಂದರು.